ಸಿಎಂ ಗ್ರಾಮ ವಾಸ್ತವ್ಯಕ್ಕೆ ಘೇರಾವ್ ಭೀತಿ

ಬಾಗಲಕೋಟೆ: ತಮ್ಮ ಹಳೆಯ ಜನಪ್ರಿಯ ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ಸಿದ್ಧತೆ ನಡೆಸಿರುವ ಬೆನ್ನಲ್ಲೇ ರಾಜ್ಯ ರೈತ ಸಂಘ ಘೇರಾವ್ ಹಾಕುವ ಬೆದರಿಕೆ ಹಾಕಿದೆ.

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಕೆ.ಜಿ.ಶಾಂತಸ್ವಾಮಿಮಠ, ಸಿಎಂ ಎಲ್ಲೆಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಾರೋ ಅಲ್ಲೆಲ್ಲ ಘೇರಾವ್ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಅಷ್ಟು ಕೋಟಿ, ಇಷ್ಟು ಕೋಟಿ ರೈತ ಸಾಲ ಮನ್ನಾ ಮಾಡಿದ್ದೇವೆ. ರೈತರ ಮನೆಗೆ ಪತ್ರ ಬರೆಯುವ ಡ್ರಾಮಾ ಕೈಬಿಡಬೇಕು. ಮೊದಲು ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಹಣವನ್ನು ಕೊಡಿಸಬೇಕು. ರೈತರ ಸಾಲ ಮನ್ನಾ ಆಗಬೇಕು. ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬದ್ಧತೆ ತೋರಿಸಬೇಕು. ಆ ನಂತರದಲ್ಲಿ ಅವರು ಗ್ರಾಮ ವಾಸ್ತವ್ಯ ಮಾಡಲಿ. ಇಲ್ಲವಾದಲ್ಲಿ ಅವರ ವಾಸ್ತವ್ಯದ ಕಡೆಗೆಲ್ಲ ರೈತರ ಘೇರಾವ್ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಡ್ರಾಮಾ ಮಾತು ಕೇಳಲು ನಾವಿಲ್ಲಿಲ್ಲ. ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಸಾಲದ ನೀತಿ, ಬರ ನಿರ್ವಹಣೆ ಹಾಗೂ ನೀರಾವರಿ ಯೋಜನೆಗಳ ಬದ್ಧತೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಎಸೆದರು.

ಸಚಿವ ಡಿಕೆಶಿ ಅಪ್ರಬುದ್ಧ
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ ಮಾತನಾಡಿ, ಸಚಿವ ಡಿ.ಕೆ.ಶಿವಕುಮಾರ್ ಒಬ್ಬ ಅಪ್ರಬುದ್ಧ ವ್ಯಕ್ತಿ ಎಂದು ಜರಿದರು. ರೈತರಿಗೆ ಜಮೀನು ಕೊಟ್ಟರೆ ಅದರಿಂದ ಸರ್ಕಾರಕ್ಕೆ ತೆರಿಗೆ ಬರಲ್ಲ. ಅದೇ ಕಾರ್ಖಾನೆಗಳಿಗೆ ಕೊಟ್ಟರೆ ತೆರಿಗೆ ಸಂಗ್ರಹ ಆಗುತ್ತದೆ ಎನ್ನುತ್ತಾರೆ. ಅವರಿಗೆ ಕಾಮನಸೆನ್ಸ್ ಇಲ್ವ? ಅವರ ತಂದೆ ಒಬ್ಬ ರೈತ ಅಂತ ನಾವು ಭಾವಿಸಿದ್ದೇವೆ. ರೈತ ಕುಟುಂಬದ ವ್ಯಕ್ತಿ ಎಂಥ ಮಾತು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ತೆರಿಗೆ ಬರುತ್ತದೆ ಅಂದರೆ ವಿಧಾನಸೌಧನೂ ಮಾರಿಬಿಡಿ. ಮುಖ್ಯಮಂತ್ರಿ ಸ್ಥಾನವನ್ನು ಯಾವುದೋ ಒಂದು ಖಾಸಗಿ ಕಂಪನಿಗೆ ಕೊಟ್ಟುಬಿಡಿ. ಅವರಿಂದ ತೆರಿಗೆಯೂ ಬರುತ್ತದೆ, ಚೆನ್ನಾಗಿ ಆಡಳಿತವನ್ನು ಕೊಡುತ್ತಾರೆ. ಹೇಗಿದ್ದರೂ ಈಗ ಎಲ್ಲ ಕಡೆಗೂ ಖಾಸಗೀಕರಣ ನಡೆಯುತ್ತಿದೆ. ವಿಧಾನಸೌಧ, ಪಾರ್ಲಿಮೆಂಟ್ ಎಲ್ಲವನ್ನು ಕೊಟ್ಟುಬಿಡಿ ಎಂದು ಟಾಂಗ್ ನೀಡಿದರು.

ಸಚಿವರು ರೈತರಿಂದ ತೆರಿಗೆ ಬರಲ್ಲ ಅಂತಿದ್ದಾರೆ. ಆದರೆ, ಈ ದೇಶದಲ್ಲಿ ಶೇ. 64 ರಷ್ಟು ಜನರು ಕೃಷಿ ಅವಲಂಬಿಸಿದ್ದಾರೆ. ಶೇ. 63 ರಷ್ಟು ಉದ್ಯೋಗ ಕೃಷಿ ಅವಲಂಬಿತವಾಗಿದೆ. ಇದರಿಂದ ಸರ್ಕಾರಕ್ಕೆ ಪರೋಕ್ಷವಾಗಿ ತೆರಿಗೆ ಬರುತ್ತದೆ. ಅಷ್ಟು ಗೊತ್ತಿಲ್ಲದೆ ಸಚಿವ ಡಿಕೆಶಿ ಏನೇನೋ ಮಾತನಾಡುತ್ತಿದ್ದಾರೆ. ರೈತರು ಈ ದೇಶಕ್ಕೆ ಅನ್ನ ಕೊಡುತ್ತಿದ್ದಾರೆ. ಅದು ಸಚಿವರಿಗೆ ನೆನಪಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *