ನ್ಯಾಯಸಮ್ಮತ ಚುನಾವಣೆ ನಡೆಯಲಿ

ಬಾಗಲಕೋಟೆ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆ ವೇಳಾ ಪಟ್ಟಿ, ಪ್ರಕ್ರಿಯೆ ಸಂಶಯ ಮೂಡಿಸಿದೆ. ನ್ಯಾಯಸಮ್ಮತ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು ಎಂದು ನೌಕರರ ಸಂಘದ ಮುಖಂಡರು ಆಗ್ರಹಿಸಿದರು.

ಚುನಾವಣೆ ವೇಳಾಪಟ್ಟಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿಲ್ಲ. ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟಿಸಿದ ಬಳಿಕ ಆಕ್ಷೇಪಣೆಗೆ ಆಹ್ವಾನ ನೀಡದೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲ ಬೆಳವಣಿಗೆ ನೋಡಿದರೆ ನ್ಯಾಯಸಮ್ಮತ ಚುನಾವಣೆ ನಡೆಯುವ ಭರವಸೆ ಇಲ್ಲ. ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ನೌಕರರ ಸಂಘದ ಮುಖಂಡರಾದ ಲಕ್ಷ್ಮಣ ಯಂಕಂಚಿ, ಎಂ.ಎಸ್. ಒಡೆಯರ ತಿಳಿಸಿದರು.

ಇಲಾಖಾವಾರು ಸೀಟು ಹಂಚಿಕೆ ಬದಲಾವಣೆ ಮಾಡಿರುವುದೂ ಕಾನೂನು ಬಾಹಿರವಾಗಿದೆ. ಬೈಲಾ ಪ್ರಕಾರ ಹಂಚಿಕೆಯಾಗಿಲ್ಲ. ಮೀನುಗಾರಿಕೆ ಇಲಾಖೆ, ಲೆಕ್ಕಪತ್ರ ಇಲಾಖೆ, ಮುದ್ರಾಂಕ ನೋಂದಣಿ, ಸಣ್ಣ ಉಳಿತಾಯ ಇಲಾಖೆ ಸೇರಿ ಬಹುತೇಕ ಇಲಾಖೆಯ ಸಿಬ್ಬಂದಿಯನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ವಾಮಮಾರ್ಗದಿಂದ ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ನೌಕರರ ಸಂಘದ ಮುಖಂಡರಾದ ಎಚ್.ಟಿ.ಕೊಡ್ಡನ್ನವರ, ಎಂ.ಸಿ.ಕೋಟಿ, ಶಫಿ ಅಹಮ್ಮದ್ ಅಚನೂರ, ರಾಜು ಅಜ್ಜೋಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *