ಮತಗಟ್ಟೆವರೆಗೆ ಸಾರಿಗೆ ವ್ಯವಸ್ಥೆ

ಬಾಗಲಕೋಟೆ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಶೇ.68 ರಷ್ಟು ಮತದಾನವಾಗಿದ್ದು, ಈ ಬಾರಿ ನೂರಕ್ಕೆ ನೂರರಷ್ಟು ಮತದಾನ ಪ್ರಮಾಣದ ಗುರಿ ಹೊಂದಲಾಗಿದೆ. ಮತದಾನದ ದಿನ ಅಂಗವಿಕಲರಿಗೆ ಮತಗಟ್ಟೆವರೆಗೆ ಆಗಮಿಸಿ ಮತ ಚಲಾಯಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

ನವನಗರದ ಕಲಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಸ್ವೀಪ್ ಯೋಜನೆಯಡಿ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 16556 ಅಂಗವಿಕಲ ಮತದಾರರು ಇದ್ದು, ಅವರೆಲ್ಲರೂ ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮತದಾನ ದಿನದಂದು ಅಂಗವಿಕಲರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಅಂಗವಿಕಲರನ್ನು ಮನೆಯಿಂದ ಮತಗಟ್ಟೆಗೆ ಹಾಗೂ ಮತಗಟ್ಟೆಯಿಂದ ಮರಳಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಅಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡರಂತೆ ಮಹಿಳೆಯರಿಗಾಗಿಯೇ ಸಖಿ (ಪಿಂಕ್) ಮತಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನವೆಂಬುದು ಒಂದು ಪವಿತ್ರ ಕಾರ್ಯವಾಗಿದ್ದು, ಪ್ರತಿಯೊಬ್ಬರಿಗೂ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. 2019 ಜನವರಿ1ಕ್ಕೆ 18 ವರ್ಷ ತುಂಬಿದ ಯುವಕರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಏ.4ರ ವರೆಗೆ ಅವಕಾಶವಿದೆ. ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಚುನಾವಣೆ ಒಂದು ಮಹತ್ವದ ಕಾರ್ಯವಾಗಿದ್ದು, ಏ.23ರಂದು ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ತಿಳಿಸಿದರು.

ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಸಿಪಿಒ ನಿಂಗಪ್ಪ ಗೋಠೆ, ಮುಖ್ಯಲೆಕ್ಕಾಧಿಕಾರಿ ಶಾಂತಾ ಕಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಬಸಣ್ಣವರ, ಸ್ವೀಪ್ ರಾಯಬಾರಿ ಸಿದ್ದಾರೂಢ ಕೊಪ್ಪದ ಸೇರಿ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ಬೆಳಗಾವಿಯ ರೇಖಾ ಹೆಗಡೆ ಅವರಿಂದ ಚಿದಂಬರ ರೂಪಕ ಭರತನಾಟ್ಯ ಕಲಾ ಪ್ರದರ್ಶನ ಜರುಗಿತು.