ಟಗರಿನ ಕಾಳಗದಲ್ಲಿ ಗೆದ್ದು ಬೀಗಿದ ಈಶ್ವರಪ್ಪ!

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಇಬ್ಬರ ನಡುವಿನ ಟಗರಿನ ಕಾಳಗ ಎಂದು ಬಿಂಬಿತವಾಗಿದ್ದ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ ಮಾಜಿ ಸಿಎಂಗೆ ತೀವ್ರ ಮುಖಭಂಗವಾಗಿದೆ.

ಗೆಲ್ಲಿಸಿಕೊಂಡು ಬರಲಿ ನೋಡೋಣ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಎಸೆದಿದ್ದ ಮಾಜಿ ಡಿಸಿಎಂ ಈಶ್ವರಪ್ಪ ಟಗರಿನ ಕಾಳಗದಲ್ಲಿ ಗೆದ್ದು ಬೀಗಿದ್ದಾರೆ.

ಹೌದು, ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ. ಗದ್ದಿಗೌಡರ ಹಾಗೂ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಪರಸ್ಪರ ಎದುರಾಳಿಯಾಗಿ ಅಖಾಡದಲ್ಲಿ ಇದ್ದರೂ ತೆರೆಯ ಹಿಂದೆ ಇದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಈಶ್ವರಪ್ಪ ನಡುವಿನ ಕಾಳಗವಾಗಿತ್ತು.

ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಶಾಸಕರು ಆಗಿದ್ದರಿಂದ ಮತದಾರರ ಮೇಲೆ ಅವರು ಪ್ರಭಾವ ಬೀರಬಹುದು ಎನ್ನುವ ಲೆಕ್ಕಾಚಾರಗಳು ಇದ್ದವು. ಇದನ್ನು ತಡೆಯಲು ಬಿಜೆಪಿ ಕೂಡ ಕ್ಷೇತ್ರದ ಉಸ್ತುವಾರಿಯನ್ನು ಮಾಜಿ ಡಿಸಿಎಂ ಈಶ್ವರಪ್ಪ ಅವರ ಹೆಗಲಿಗೆ ವಹಿಸಿ ಜಾಣ್ಮೆ ಮೆರೆದಿತ್ತು.

ಜವಾಬ್ದಾರಿ ವಹಿಸಿಕೊಂಡ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಸ ಮಾಡಿದ ಈಶ್ವರಪ್ಪ, ಬೂತ್‌ಮಟ್ಟದಲ್ಲೂ ತೆರಳಿ ಸಭೆ, ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ ಅವರ ಆಟ ನಡೆಯಲ್ಲ, ಬಾದಾಮಿಯಲ್ಲಿ ಅವರು ಅಪರೂಪದ ಶಾಸಕ ಎಂದು ಕೆಣಕಿದ್ದರು. ಇದಕ್ಕೆ ಸಿದ್ದರಾಮಯ್ಯ ಕೂಡ ಈ ಈಶ್ವರಪ್ಪ ಬಿಜೆಪಿ ಗೆಲ್ಲಿಸಲಿ ನೋಡೋಣ ಎಂದು ಪ್ರತಿ ಸವಾಲು ಹಾಕಿದ್ದರು. ಚುನಾವಣೆ ವೇಳೆ ಇವರಿಬ್ಬರ ನಡುವೆ ಟೀಕೆ, ಟಿಪ್ಪಣಿಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿತ್ತು.

ಆದರೆ, ಸಿದ್ದರಾಮಯ್ಯ ಅವರು ಈಶ್ವರಪ್ಪ ಅವರಿಗೆ ಸವಾಲು ಹಾಕಿದ್ದೇ ಬಂತು, ಅದಕ್ಕೆ ತಕ್ಕಂತೆ ಚುನಾವಣೆಯಲ್ಲಿ ಕ್ಷೇತ್ರದ ಕಡೆಗೆ ಗಮನ ಹರಿಸಲಿಲ್ಲ. ತಮಗೆ ರಾಜಕೀಯ ಪುನರ್ ಜೀವನ ನೀಡಿದ್ದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಮತ್ತು ಪ್ರವಾಸ ಮಾಡಲಿಲ್ಲ. ಪಕ್ಷದಲ್ಲಿದ್ದ ಆಂತರಿಕ ಕಲಹ ಸರಿಪಡಿಸುವ ನಿಟ್ಟಿನಲ್ಲೂ ಹೆಚ್ಚಿನ ಕಾಳಜಿ ವಹಿಸಲಿಲ್ಲ. ಹತ್ತರಲ್ಲಿ ಹನ್ನೊಂದು ಕ್ಷೇತ್ರ ಎನ್ನುವಂತೆ ಬಂದೋದರು. ರಿಣಾಮ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗಿ ಸಿದ್ದರಾಮಯ್ಯ ಆಟ ನಡೆಯಲ್ಲ ಎನ್ನುವ ಈಶ್ವರಪ್ಪ ಟೀಕೆಗೆ ಪುಷ್ಠಿ ಬಂದಂತಾಗಿದೆ.

ಜಿಲ್ಲೆಯಲ್ಲಿ ಕೈ ಭವಿಷ್ಯ ಮಂಕು
ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷಕ್ಕೆ ಈ ಸಲ ಮಾಡು ಇಲ್ಲವೆ ಮಡಿ ಎನ್ನುವ ಸ್ಥಿತಿ ಇತ್ತು. ಲಿತಾಂಶದ ಬಳಿಕ ಜಿಲ್ಲೆಯ ಕಾಂಗ್ರೆಸ್ ಪಕ್ಷ ಭವಿಷ್ಯದ ಮೇಲೆ ಮತ್ತಷ್ಟು ಮಂಕು ಆವರಿಸಿದೆ.

ವೀಣಾ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಆದಾಗಲೇ ಎಲ್ಲೋ ಒಂದು ಕಡೆ ಇವರು ದೈತ್ಯ ಶಕ್ತಿ ವಿರುದ್ಧ ಈಜಲು ಮುಂದಾಗಿದ್ದಾರೆ ಎನ್ನುವ ಮಾತು ತೂರಿ ಬಂದಿದ್ದವು. ಇದರ ಜತೆಗೆ ಕಾಂಗ್ರೆಸ್ ಸೋಲಿಸಲು ಕಾಂಗ್ರೆಸ್ಸಿಗರೇ ಸಾಕು ಎನ್ನುವ ಲೇವಡಿ ಮಾತುಗಳು ಹರಿದಾಡುತ್ತಿದ್ದವು. ಪ್ರಚಾರದ ವೇಳೆ ಪಕ್ಷದ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದರಾದರೂ ಅದು ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ವಿಲವಾಗಿದೆ. ಹೀಗಾಗಿ ಕ್ಷೇತ್ರದ ಇತಿಹಾಸದಲ್ಲಿ ಗರಿಷ್ಠ ಮತಗಳ ಅಂತರದಲ್ಲಿ ವೀಣಾ ಕಾಶಪ್ಪನವರ ಸೋಲು ಅನುಭವಿಸಬೇಕಾಯಿತು.

ಜನರ ತೀರ್ಪಿಗೆ ತಲೆಬಾಗುತ್ತೇನೆ. ಸೋಲಿನ ಹೊಣೆಯನ್ನು ಯಾರ ಮೇಲೆಯೂ ಹೊರಿಸಲ್ಲ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಸಾಕಷ್ಟು ಪ್ರಯತ್ನ ಮಾಡಿದರೂ ಗೆಲುವು ಸಿಗಲಿಲ್ಲ. ಅಂತಿಮವಾಗಿ ಮತದಾರರ ನಿರ್ಣಯವನ್ನು ಗೌರವಿಸುತ್ತೇನೆ.
– ವೀಣಾ ಕಾಶಪ್ಪನವರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ

Leave a Reply

Your email address will not be published. Required fields are marked *