ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮ

ಬಾಗಲಕೋಟೆ: ಜಿಲ್ಲೆಯ 6 ತಾಲೂಕುಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಬರ ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇವು ಬ್ಯಾಂಕ್ ಸ್ಥಾಪನೆಗೆ ತಹಸೀಲ್ದಾರರು, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯವರು ಸಮನ್ವಯತೆ ಸಾಧಿಸಿ ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಲು ಸೂಚಿಸಿದರು.

ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಿದ ಬಿಲ್‌ಗಳನ್ನು ಪ್ರತಿ 15 ದಿನಗಳಿಗೊಮ್ಮೆ ಪಾವತಿಸಬೇಕು. ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವ ಮಾಲೀಕರಿಗೆ ಹಣ ಪಾವತಿಸದಿದ್ದಲ್ಲಿ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಅಧಿಕಾರಿಗಳು, ಪಿಡಿಒ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಬಾದಾಮಿ ಹಾಗೂ ಹುನಗುಂದ ತಾಲೂಕುಗಳಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಿದ ಬಿಲ್‌ಗಳನ್ನು ಏಪ್ರಿಲ್ 2019ರ ಅಂತ್ಯದವರೆಗೆ ಪಾವತಿಸಲಾಗಿದೆ ಎಂದು ಹೇಳಿದರು.

ನೀರು ಸರಬರಾಜು ಮಾಡುತ್ತಿರುವ ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿ ವರದಿ ಸಲ್ಲಿಸಲು ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ಸೂಚನೆ ನೀಡಿದರು. ಈ ಕುರಿತು ನಿಗಾವಹಿಸಲು ಜಿಪಂ ಸಿಇಒ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗದಂತೆ ಕ್ರಮ ವಹಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಮುದಾಯ ಕಾಮಗಾರಿಗಳನ್ನು ಹೆಚ್ಚೆಚ್ಚು ತೆಗೆದುಕೊಳ್ಳುವುದು ಹಾಗೂ ಯೋಜನೆ ಕುರಿತು ಪ್ರಚಾರಾಂದೋಲನ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮೀಣ ಜನರಿಗೆ ಯೋಜನೆ ಕುರಿತು ಅರಿವು ಮೂಡಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸಲು ನಿರ್ದೇಶನ ನೀಡಿದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ, ಉಪವಿಭಗಾಧಿಕಾರಿ ಎಚ್. ಜಯಾ ಸೇರಿ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಸೀಲ್ದಾರರು ಉಪಸ್ಥಿತರಿದ್ದರು.