ಕಾಂಗ್ರೆಸ್ ನಾಯಕರು ರಾಜಕೀಯ ಸಂತ್ರಸ್ತರು

ಬಾಗಲಕೋಟೆ: ಜಲಪ್ರಳಯದಲ್ಲಿ ಜನರು ಸಂತ್ರಸ್ತರಾದ ರೀತಿಯಲ್ಲಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ರಾಜಕೀಯ ಸಂತ್ರಸ್ತರಾಗಿದ್ದಾರೆ. ಕೈ ಮುಖಂಡರಿಗೆ ಮಾಡಲು ಕೆಲಸವಿಲ್ಲ ಎಂದು ನೂತನ ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಬಾಗಲಕೋಟೆ ನಗರದಲ್ಲಿ ಗುರುವಾರ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಶಾಸಕ ಉಮೇಶ ಕತ್ತಿ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ನನ್ನ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರ ಬಗ್ಗೆ ಸುಮ್ಮನೆ ಊಹಾಪೋಹ ಎದ್ದಿದೆ. ಅದನ್ನು ನಂಬಬಾರದು ಎಂದರು.

ಕಾಂಗ್ರೆಸ್ ಪಕ್ಷದವರಿಗೆ ಮಾಡಲು ಏನೂ ಕೆಲಸ ಇಲ್ಲವಾಗಿದೆ. ರಾಜಕೀಯವಾಗಿ ನಿರಾಶ್ರಿತವಾಗಿದ್ದು, ತಮ್ಮ ಕೇಂದ್ರಕ್ಕೆ ಉಮೇಶ ಕತ್ತಿ ನೆರವು ನೀಡಬಹುದು ಎಂದು ಕರೆಯುತ್ತಿದ್ದಾರೆ. ಆದರೆ, ಅವರು ಬರಲ್ಲ ಎಂದು ಹೇಳಿದರು.

ಇವತ್ತು ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ?. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಬಿಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡುವ ಶಕ್ತಿಯೂ ಅವರಿಗೆ ಉಳಿದಿಲ್ಲ. ಕಾಂಗ್ರೆಸ್ ಪಕ್ಷ ಈಗ ಎಲ್ಲಿದೆ ಎಂದು ಚುಚ್ಚಿದರು.

ಬಿಜೆಪಿಯಲ್ಲಿ ಸಚಿವ ಸ್ಥಾನದ ಅತಪ್ತಿ ದೊಡ್ಡದಾಗುತ್ತಿದ್ದು, ಸರ್ಕಾರದ ಆಯುಷ್ಯ ಹೆಚ್ಚಿಲ್ಲ ಎಂದು ಭವಿಷ್ಯ ನುಡಿದಿದ್ದ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರಿಗೆ ಈಶ್ವರಪ್ಪ ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಎಸ್.ಆರ್. ಪಾಟೀಲ ಪರಿಸ್ಥಿತಿ ಏನಾಗಿದೆ ? ಈ ಹಿಂದೆ ನಾವು, ಅವರು ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರಾಗಿದ್ದವರು. ಈಗ ಅವರು ಪ್ರತಿಪಕ್ಷ ನಾಯಕರು ಆಗುತ್ತಿಲ್ಲ. ಈ ಅವಧಿ ಮುಗಿದ ಮೇಲೆ ಮುಂದೆ ಅವರನ್ನು ವಿಧಾನ ಪರಿಷತ್‌ಗೆ ಕಳಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಛೇಡಿಸಿದರು.

ಕಾಂಗ್ರೆಸ್ ನಾಯಕರಿಗೆ ಟೀಕೆ ಮಾಡುವುದೊಂದೆ ಗೊತ್ತು, ಬೇರೆನೂ ಗೊತ್ತಿಲ್ಲ. ಅವರ ಕಡೆಗೆ ಅಧಿಕಾರ ಇದ್ದಾಗ ಅವರ ಬಳಿ ಇದ್ದ 18 ಜನ ಶಾಸಕರು ಯಾಕೆ ಬಿಟ್ಟು ಹೋದರು ಎಂದು ಮೊದಲು ಹೇಳಲಿ ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *