ಸರ್ಕಾರದ ವಿರುದ್ಧ ಸಂತ್ರಸ್ತರ ಪ್ರತಿಭಟನೆ

ಬಾಗಲಕೋಟೆ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರವಾಹ ಪೀಡಿತ ಮುಧೋಳ ಭಾಗದ ಸಂತ್ರಸ್ತರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಸಂತ್ರಸ್ತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಹಲವು ದಿನಗಳಿಂದ ಘಟಪ್ರಭಾ ಪ್ರವಾಹದಿಂದ ಜನ, ಜಾನುವಾರುಗಳ ಜೀವನ ಚಿಂತಾಜನಕವಾಗಿದೆ. ಮುಂದಿನ ಜೀವನ ಹೇಗೆ ಎಂಬುದು ತಿಳಿಯದಂತಾಗಿದೆ. ರೈತರು, ಕೂಲಿಕಾರ್ಮಿಕರಿಗೆ ದಿಕ್ಕು ತೋಚದಂತಾಗಿದೆ. ರಾಜ್ಯ ಸರ್ಕಾರ ವಿತರಿಸುತ್ತಿರುವ ತಾತ್ಕಾಲಿಕ ಪರಿಹಾರ ಧನ ಏತಕ್ಕೂ ಸಾಲುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾತ್ಕಾಲಿಕ ಪರಿಹಾರಕ್ಕೆ ಆಗ್ರಹ
ಸಿಎಸಿಪಿ (ಕಮಿಷನ್ ಫಾರ್ ಅಗ್ರಿಕಲ್ಚರ್ ಕಾಸ್ಟ್ ಆ್ಯಂಡ್ ಪ್ಯಾಜೀಸ್) ವರದಿ ಪ್ರಕಾರ ಒಂದು ಎಕರೆ ಕಬ್ಬು ಬೆಳೆಯಲು 60 ಸಾವಿರ ರೂ. ಖರ್ಚಾಗುತ್ತದೆ. ಈ ಮಾನದಂಡವಿಟ್ಟುಕೊಂಡು ಪ್ರವಾಹಕ್ಕೆ ತುತ್ತಾದ ಕಬ್ಬು ಬೆಳೆಗೆ ಪ್ರತಿ ಎಕರೆಗೆ ಪರಿಹಾರ ಧನ ನೀಡಬೇಕು. ಉಳಿದ ಬೆಳೆಗಳಿಗೆ ಪ್ರತಿ ಎಕರೆಗೆ 40 ಸಾವಿರ ರೂ. ನೀಡಬೇಕು. ಸಾವಿಗೀಡಾದ ದನಕರುಗಳಿಗೆ 50 ಸಾವಿರ ರೂ. ಕೊಡಬೇಕು. ನಿರಾಶ್ರಿತರಿಗೆ ತಕ್ಷಣ ತಾತ್ಕಾಲಿಕ ಶೆಡ್ ನಿರ್ಮಿಸಬೇಕು. ಭಾಗಶಃ, ಪೂರ್ಣ ಹಾನಿಯಾದ ಮನೆಗಳ ನಿರಾಶ್ರಿತರಿಗೆ ಬಾಡಿಗೆ ಮನೆಯಲ್ಲಿ ಇರಲು ಬಾಡಿಗೆ ನೀಡಬೇಕು. ವಿದ್ಯುತ್ ಕಂಬ, ಟಿಸಿಗಳು ಹಾಗೂ ಒಡೆದು ಹೋದ ನೀರಾವರಿ ಕಾಲುವೆ ಶೀಘ್ರ ದುರಸ್ತಿಗೊಳಿಸಬೇಕು. ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು. ಸಕ್ಕರೆ ಕಾರ್ಖಾನೆಗಳ ಬಾಕಿ ಹಣವನ್ನು 15 ದಿನದೊಳಗೆ ಪಾವತಿ ಮಾಡಬೇಕು. ಸಂತ್ರಸ್ತರ ಜಾನುವಾರುಗಳಿಗೆ ಕನಿಷ್ಠ ಮೂರು ತಿಂಗಳು ಉಚಿತವಾಗಿ ಮೇವು ಪೂರೈಸಬೇಕು ಎಂದು ಆಗ್ರಹಿಸಿದರು.

ಶಾಶ್ವತ ಪರಿಹಾರಕ್ಕೆ ಹಕ್ಕೊತ್ತಾಯ..
ಮುಳುಗಡೆಯಾಗುವ ಜಮೀನುಗಳನ್ನು ಗುರುತಿಸಿ ಯುಕೆಪಿ ಮಾದರಿಯಲ್ಲಿ ಪರಿಹಾರ ನೀಡಬೇಕು. ಸಂಪೂರ್ಣ ಜಲಾವೃತವಾಗಿದ್ದ ಪ್ರದೇಶ, ಗ್ರಾಮಗಳನ್ನು ಗುರುತಿಸಿ ಅಲ್ಲಿನ ಜನರ ಬೇಡಿಕೆ ಆಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ನಿರಾಶ್ರಿತರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು. ಪ್ರವಾಹದಿಂದ ಹಾಳಾದ ರಸ್ತೆ, ಸೇತುವೆಗಳನ್ನು ಮರು ನಿರ್ಮಾಣ ಮಾಡಬೇಕು ಎಂದು ಮುಧೋಳ ಭಾಗದ ಪ್ರವಾಹ ಪೀಡಿತ ಸಂತ್ರಸ್ತರು ಪ್ರತಿಭಟನೆ ವೇಳೆ ಹಕ್ಕೊತ್ತಾಯ ಮಂಡಿಸಿದರು.

ಕೆ.ಟಿ.ಪಾಟೀಲ, ದಯಾನಂದ ಪಾಟೀಲ, ಸತೀಶ ಬಂಡಿವಡ್ಡರ, ಉದಯ ಸಾರವಾಡ, ಮುತ್ತು ದೇಸಾಯಿ, ಜಿ.ಆರ್.ಗುಜ್ಜನವರ, ವೆಂಕಣ್ಣ ಗಿಡ್ಡಪ್ಪನವರ, ದುಂಡಪ್ಪ ಲಿಂಗರಡ್ಡಿ, ತಿಮ್ಮಣ್ಣ ಬಟಕುರ್ಕಿ, ಮಹೇಶಗೌಡ ಪಾಟೀಲ, ವಿಶ್ವನಾಥ ಜಿ., ಸೋಮಪ್ಪ ಮುಳ್ಳೂರ, ಕೆ.ವೈ.ಬುದ್ನಿ, ಪ್ರಕಾಶ ಹಲಗಲಿ, ರಾಜು ಬಾಗೇವಾಡಿ ಪ್ರತಿಭಟನೆಯಲ್ಲಿ ಇದ್ದರು.

Leave a Reply

Your email address will not be published. Required fields are marked *