More

    ರೈತರ ಸಮಸ್ಯೆ ಪರಿಹರಿಸಲು ಗಮನಹರಿಸಿ

    ಬಾಗಲಕೋಟೆ: ಪ್ರವಾಹದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ -ರಾಜ್ಯ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸದೆ ಚೆಲ್ಲಾಟವಾಡುತ್ತಿವೆ. ಕೂಡಲೇ ರೈತರ ಸಮಸ್ಯೆಗಳಿಗೆ ಪೂರ್ಣ ವಿರಾಮ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಐ.ಎನ್.ಬಸವೇಗೌಡರ ಆಗ್ರಹಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯಿಂದ 524.26 ಮೀಟರ್‌ವರೆಗೆ ಮುಳುಗಡೆಯಾಗುವ ಭೂಮಿ, ಆಸ್ತಿಗಳಿಗೆ ಮಾರುಕಟ್ಟೆ ಬೆಲೆ ನೀಡಬೇಕು. ಪುನರ್ವಸತಿ ಕೇಂದ್ರಗಳಿಗೆ ನಗರ ಯೋಜನೆ ನಿಯಮದಂತೆ ಮೂಲ ಸೌಕರ್ಯ ಒದಗಿಸಬೇಕು. ಪುನರ್ವಸತಿಗಾಗಿ ಭೂಮಿ ನೀಡಿದ ರೈತರನ್ನು ಸಂತ್ರಸ್ತರು ಎಂದು ಪರಿಗಣಿಸಬೇಕು. ಬಾಗಲಕೋಟೆ ನಗರ ಮುಳುಗಡೆ ಹಂತವನ್ನು 527 ಮೀಟರ್‌ವರೆಗೆ ವಿಸ್ತರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ಪ್ರವಾಹದಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಸಾವಿರಾರು ಮನೆಗಳು ಬಿದ್ದು ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಮನೆಗಳ ಸರ್ವೇ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ರಾಜಕೀಯ ಮಾಡಿ ನಿಜವಾದ ಫಲಾನುಭವಿಗಳನ್ನು ಕೈಬಿಡಲಾಗಿದೆ. ಮರು ಸರ್ವೇ ನಡೆಸಿ ಅರ್ಹರನ್ನು ಸೇರ್ಪಡೆಗೊಳಿಸಬೇಕು. ಕಬ್ಬು, ಜೋಳ, ಹೆಬ್ಬೇವು, ಶ್ರೀಗಂಧ, ರಕ್ತ ಚಂದನ, ಜೋಳ, ಸಜ್ಜೆ ಸೇರಿದಂತೆ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಯೋಗ್ಯ ಪರಿಹಾರ ನೀಡಬೇಕು. ನೀರಾವರಿ ಬೆಳೆಗೆ ಪ್ರತಿ ಎಕರೆಗೆ 1 ಲಕ್ಷ ರೂ., ಒಣಬೇಸಾಯಕ್ಕೆ 30 ಸಾವಿರ ರೂ.ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

    ಮುಖಂಡ ಪ್ರಕಾಶ ಅಂತರಗೊಂಡ ಮಾತನಾಡಿ, ಹಿಡಕಲ್ ಜಲಾಶಯದಿಂದ ಜಿಆರ್‌ಬಿಸಿ ಕಾಲುವೆಯಿಂದ ಈವರೆಗೆ ಬಾದಾಮಿ, ಬಾಗಲಕೋಟೆ ತಾಲೂಕಿಗೆ ನೀರು ಬಂದಿಲ್ಲ. ಇದರಿಂದ 1ಲಕ್ಷ ಎಕರೆ ಭೂಮಿ ನೀರಾವರಿಯಿಂದ ವಂಚಿತವಾಗಿದೆ. ಹಿಡಕಲ್ ಜಲಾಶಯದಿಂದ ನೀರು ಹರಿಸಲು ಸಾಧ್ಯವಾಗದಿದ್ದರೆ ಈ ಕಾಲುವೆಗಳಿಗೆ ಏತ ನೀರಾವರಿ ಯೋಜನೆ ಮೂಲಕ ಆಲಮಟ್ಟಿ ಜಲಾಶಯದ ಹಿನ್ನೀರು ಹರಿಸಬೇಕು. ವಿಫಲವಾಗಿರುವ ಮರೋಳ ಏತ ನೀರಾವರಿ ಯೋಜನೆ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಕರೆಗಳನ್ನು ಅಭಿವೃದ್ಧಿ ಪಡಿಸಬೇಕು. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಉಂಟಾಗಿರುವ ಸವಳು-ಜವಳು ಭೂಮಿ ಸುಧಾರಣೆಗೆ ಯೋಜನೆ ರೂಪಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ನ್ಯೂನತೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

    ಭಾರತೀಯ ಕಿಸಾನ್ ಸಂಘದ ಮುಖಂಡರಾದ ನಬಿ ನದಾಫ್, ವಿರುಪಾಕ್ಷಿ ರೇವಡಿಗಾರ, ಗುರುನಾಥ ಬಗಲಿ, ಶಿವಾನಂದ ಬಿದರಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts