ಬಾಗಲಕೋಟೆ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ರಸಗೊಬ್ಬರ, ಬೀಜ, ಕೀಟನಾಶಕ ಮಾರಾಟ ಮಳಿಗೆಗಳ ಮೇಲೆ ಕೃಷಿ ಇಲಾಖೆ ಜಾಗೃತ ದಳ ಅಧಿಕಾರಿಗಳು ಈಚೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ವಿಭಾಗದ ಜಾಗೃತ ದಳದ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ನೇತೃತ್ವದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ವ್ಯಾಪ್ತಿಯ ಎಲ್ಲ ಪರಿವೀಕ್ಷಕರನ್ನೊಳಗೊಂಡು ರಚಿಸಲಾಗಿದ್ದ ಐದು ತಂಡಗಳು ದಾಳಿ ನಡೆಸಿವೆ. ಮೊದಲ ತಂಡ ಬಾಗಲಕೋಟೆ ತಾಲೂಕು, 2ನೇ ತಂಡ ಜಮಖಂಡಿ ತಾಲೂಕು, 3ನೇ ತಂಡ ಮುಧೋಳ ಮತ್ತು ಬೀಳಗಿ, 4ನೇ ತಂಡ ಬಾದಾಮಿ ಹಾಗೂ 5ನೇ ತಂಡ ಹುನಗುಂದ ತಾಲೂಕುಗಳ ಮಳಿಗೆಗಳ ಮೇಲೆ ಶುಕ್ರವಾರ ಏಕಾಕಾಲಕ್ಕೆ ದಾಳಿ ನಡೆಸಿ ತಪಾಸಣೆ ಕೈಗೊಂಡವು.
ಸಂಶಯಾಸ್ಪದವಾಗಿ ಕಂಡುಬಂದ ಜೈವಿಕ ಉತ್ಪನ್ನ, ರಸಗೊಬ್ಬರಗಳ ಮಿಶ್ರಣ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ಸೂಚಿಸಲಾಯಿತು. ಬಾಗಲಕೋಟೆ ತಾಲೂಕಿನಲ್ಲಿ 11, ಬಾದಾಮಿ 11, ಹುನಗುಂದ 13, ಜಮಖಂಡಿ 9, ಮುಧೋಳ 10 ಹಾಗೂ ಬೀಳಗಿ 4ರಂತೆ 58 ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಯಿತು.
ಕೆಲವು ಮಾರಾಟ ಮಳಿಗೆಗಳಲ್ಲಿ ಪರವಾನಗಿ ನವೀಕರಿಸದಿರುವುದು, ದಾಸ್ತಾನು ಪುಸ್ತಕ ನಿರ್ವಹಣೆ ಮಾಡದಿರುವುದು, ನಮೂನೆ ಪ್ರಕಾರ ರೈತರಿಗೆ ಬಿಲ್ ನೀಡದಿರುವುದು ಮತ್ತು ದರಪಟ್ಟಿ ಇಡದಿರುವುದು ಕಂಡುಬಂದಿದ್ದು, ಅಂತಹ ಮಳಿಗೆ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತಿರುವ ಮಾರಾಟಗಾರರಿಗೆ ಗುಣಮಟ್ಟದ ಪರಿಕರಗಳನ್ನು ಮಾರಾಟ ಮಾಡಲು ಸೂಚಿಸಲಾಯಿತು. ಯಾವುದೇ ಕಾರಣಕ್ಕೂ ಕಳಪೆ, ಪರವಾನಗಿ ಇಲ್ಲದ ಮತ್ತು ಅವಧಿ ಮೀರಿದ ಪರಿಕರ ಮಾರಾಟ ಮಾಡಬಾರದು ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದರು. ಜೈವಿಕ ಉತ್ಪನ್ನಗಳ ಹೆಸರಿನಲ್ಲಿ ಕೀಟನಾಶಕ ಮಿಶ್ರಣ ಮಾಡಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು ಎಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.