ಮಗನ ಆಸ್ತಿ ದಾಹಕ್ಕೆ ಕೊಲೆಯಾದ ಅಮಾಯಕ ತಂದೆಯ ಹಿಂದಿದೆ ಕರುಣಾಜನಕ ಕತೆ

ಬಾಗಲಕೋಟೆ: ಆಸ್ತಿಯ ದಾಹಕ್ಕಾಗಿ ಕ್ರೂರ ಮಗನೊಬ್ಬ ಹೆತ್ತ ತಂದೆಯ ಜತೆಯೇ ಜಗಳ ತೆಗೆದು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಬಾದಾಮಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಮೃತ ದುರ್ದೈವಿ. ಆರೋಪಿ ಶರಣಪ್ಪ ಮೃತ ಮಲ್ಲಿಕಾರ್ಜುನನ ಮೊದಲನೇ ಮಗ. ಮಲ್ಲಿಕಾರ್ಜುನನ ಎರಡನೆಯ ಮಗ ಒಳ್ಳೆಯ ದಾರಿಯಲ್ಲಿ ಬೆಳಿತಿದ್ದ. ಆದರೆ, ಆರೋಪಿ ಶರಣಪ್ಪ ಮೊದಲಿನಿಂದಲೂ ದಾರಿ ತಪ್ಪಿದ್ದ. ಪಿತ್ರಾರ್ಜಿತ ಆಸ್ತಿಯಲ್ಲಿ ತನಗೆ ಪಾಲು ಕೊಡು ಎಂದು ತಂದೆಯ ಜತೆ ಸದಾ ಜಗಳ ಆಡುತ್ತಿದ್ದ. ಕೊನೆಗೆ ಇವನ ಹಠಕ್ಕೆ ರೋಸಿ ಹೋಗಿ ಮಲ್ಲಿಕಾರ್ಜುನ, ತನ್ನ ಹೆಸರಲ್ಲಿದ್ದ 12 ಎಕರೆ ತೋಟದಲ್ಲಿ 4 ಎಕರೆಯನ್ನು ಶರಣಪ್ಪನ ಹೆಸರಿಗೆ ಮಾಡಿಸಿಕೊಟ್ಟಿದ್ದ. ಇಷ್ಟಕ್ಕೆ ಸುಮ್ಮನಾಗದ ಶರಣಪ್ಪ ಉಳಿದ 8 ಎಕರೆ ದಾಳಿಂಬೆ ತೋಟವನ್ನು ಪೂರ್ತಿ ತನ್ನ ಹೆಸರಿಗೆ ಬರೆದು ಕೊಡು ಎಂದು ಜಗಳಕ್ಕೆ ನಿಂತಿದ್ದ.

ತನ್ನದೇ ತೋಟದಲ್ಲಿ ಕೂಲಿ ಆಳಾಗಿದ್ದ ಮಲ್ಲಿಕಾರ್ಜುನ
ಮಲ್ಲಿಕಾರ್ಜುನಪ್ಪ ತನ್ನದೇ ತೋಟವನ್ನು ಬೇರೆಯವರಿಗೆ ಭೋಗ್ಯಕ್ಕೆ ಹಾಕಿ, ತಾನೇ ಅದರ ನಿರ್ವಹಣೆ ನೋಡಿಕೊಳ್ಳುತ್ತೇನೆಂದು ಹೇಳಿ ತನ್ನದೇ ತೋಟದಲ್ಲಿ ದಿನಗೂಲಿ ಕೆಲಸಗಾರನಾಗಿ ದುಡಿಯುತ್ತಿದ್ದ. ಮಗ ಶರಣಪ್ಪ ಎಷ್ಟೇ ಜಗಳ ಕಾದರೂ ಎಲ್ಲವನ್ನು ಸಹಿಸಿಕೊಂಡು ತನ್ನ ಜತೆಯಲ್ಲಿಯೇ ಕೆಲಸಕ್ಕೆ ಸೇರಿಸಿಕೊಂಡು ಆತನನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸಿದ್ದ. ಆದರೆ, ಜಗಳ ಆಡುವುದನ್ನು ಮಾತ್ರ ಶರಣಪ್ಪ ನಿಲ್ಲಿಸಿರಲಿಲ್ಲ. ಇದೇ ವಿಚಾರವಾಗಿ 3 ತಿಂಗಳ ಹಿಂದೆ ತಂದೆ-ಮಗ ಇಬ್ಬರು ಮಾತು ಬಿಟ್ಟಿದ್ದರು.

ಕೊನೆಗೂ ನಡದೇ ಹೋಯಿತು ಘೋರ ಘಟನೆ
ಹೀಗಿರುವಾಗ ಕಳೆದ 3 ನೇ ತಾರೀಖಿನಂದು ಶರಣಪ್ಪ ಎಂದಿನಂತೆಯೇ ಬೆಳಗ್ಗೆ ಎದ್ದು ಹಾಲು ಕರೆದು ಡೈರಿಗೆ ಹಾಕಿ ಮನೆಗೆ ವಾಪಸಾಗಿ ಮತ್ತೆ ಆಸ್ತಿ ವಿಚಾರವಾಗಿ ಜಗಳ ತೆಗೆದಿದ್ದ. ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಅಲ್ಲಿಯೇ ಇದ್ದ 5 ಕೆ.ಜಿ. ಗ್ಯಾಸ್ ಸಿಲಿಂಡರ್​ನಿಂದ ವಯಸ್ಸಾದ ಅಪ್ಪನ ತಲೆಗೆ ಬಲವಾಗಿ ಹೊಡೆದು ಸಾಯಿಸಿದ್ದಾನೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಕೊಲೆಯಾದ ನಂತರ ಆರೋಪಿ ಶರಣಪ್ಪ ಮೊಬೈಲ್​ನಲ್ಲಿ ಮತ್ತೊಬ್ಬರ ಜತೆ ಜೋರು ಧ್ವನಿಯಲ್ಲಿ ಮಾತನಾಡುವುದನ್ನು ಕಂಡು ನೆರೆ ಮನೆಯವರು ಅನುಮಾನಗೊಂಡಿದ್ದಾರೆ. ತಕ್ಷಣ ಮಾಹಿತಿಯನ್ನು ಪೊಲೀಸರಿಗೆ ತಿಳಿಸಲು, ಅವರು ಬಂದು ಮನೆಯ ಬಾಗಿಲನ್ನು ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಬಾದಾಮಿ ಪಟ್ಟಣ ಪೊಲೀಸರು ತನಿಖೆ ಆರಂಭಿಸುವುದಕ್ಕೂ ಮುಂಚೆಯೇ ಆರೋಪಿ ಶರಣಪ್ಪ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.(ದಿಗ್ವಿಜಯ ನ್ಯೂಸ್​)