ಪಶುಸಂಗೋಪನೆಯಿಂದ ಆರ್ಥಿಕ ಅಭಿವೃದ್ಧಿ

ಬಾಗಲಕೋಟೆ: ರೈತರು ಕೃಷಿ ಜೊತೆ ಉಪ ಕಸಬು ಪಶು ಸಂಗೋಪನೆಗೆ ಆದ್ಯತೆ ನೀಡಿದರೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ನಗರದ ಹೊರವಲಯದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ, ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಶುಸಂಗೋಪನೆಯಲ್ಲಿ ಕಡಿಮೆ ಅವಧಿಯಲ್ಲಿ ವರ್ಷವಿಡೀ ಹಾಲು ಕೊಡುವ ಜಾನುವಾರು ಲಭ್ಯವಿದ್ದು, ಒಂದು ಆಕಳು ಒಂದು ಕುಟುಂಬ ನಿರ್ವಹಿಸುತ್ತದೆ. ಕೃತಕ ಗರ್ಭಧಾರಣೆ ಮೂಲಕ ನಿರಂತರ ಹಾಲು ನೀಡುವ ರಾಸುಗಳನ್ನು ರೈತರು ಸಾಕಾಣಿಕೆ ಮಾಡಬೇಕು. ಕೆಂಪು ಶಿಂಧಿ, ಜರ್ಸಿ, ಎಚ್‌ಎಫ್, ಮುರ‌್ರಾ ತಳಿಯ ಜಾನುವಾರುಗಳಿಗೆ ಬಹುದೊಡ್ಡ ಬೇಡಿಕೆಯಿದೆ. ರೋಗಗಳಿಗೆ ತುತ್ತಾಗದಂತೆ ಜಾನುವಾರುಗಳನ್ನು ರಕ್ಷಣೆ ಮಾಡಬೇಕು. ಜಾನುವಾರುಗಳ ಮೇಲೆ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಮೃತಪಟ್ಟರೆ ವಿಮೆಯಿಂದ ನಷ್ಟ ಸರಿದೂಗಿಸಿಕೊಳ್ಳಬಹುದು ಎಂದು ತಿಳಿಸಿದರು.

ರೈತರು ಹಾಗೂ ಹೈನುಗಾರಿಕೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿನೂತನ ಯೋಜನೆ ಜಾರಿ ಮಾಡಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು, ತಳಿಗಳ ಅಭಿವೃದ್ಧಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕೇಂದ್ರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಆರ್.ಕೆ.ಹೆಗಡೆ ಮಾತನಾಡಿ, ತಳಿ ಸುಧಾರಣೆಗಾಗಿ ರಾಜ್ಯದಲ್ಲಿ 12 ಜಿಲ್ಲೆ ಆಯ್ಕೆ ಮಾಡಲಾಗಿದ್ದು, ಬಾಗಲಕೋಟೆ ಜಿಲ್ಲೆಯೂ ಕೂಡ ಒಂದಾಗಿದೆ. ಜಿಲ್ಲೆಯ 100 ಗ್ರಾಮಗಳನ್ನು ಆಯ್ಕೆ ಮಾಡಿ ಪ್ರತಿ ಗ್ರಾಮದಲ್ಲಿ 200 ಜಾನುವಾರುಗಳನ್ನು ಕೃತಕ ತಳಿ ಅಭಿವೃದ್ಧಿ ಪಡಿಸುವ ಮೂಲಕ ಹಾಲು ಉತ್ಪಾದನೆಯಲ್ಲಿ ಮಹತ್ತರ ಬದಲಾವಣೆ ತರಲು ಉದ್ದೇಶಿಸಲಾಗಿದೆ ಎಂದರು.

ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿಗಳು ಚಾಲನೆ ನೀಡಿದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ನೇರ ಪ್ರಸಾರ ಬಿತ್ತರಿಸಲಾಯಿತು. ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಎಸ್.ಬಿ. ಕೊಂಗವಾಡ ರೈತರಿಗೆ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಡಾ. ಮಾನೇಶ್ವರಿ ಕಮ್ಮಾರ, ಬಿ.ಜಿ. ಪಾಟೀಲ, ಯಲ್ಲಪ್ಪ ಬೆಂಡಿಗೇರಿ ಇತರರು ಇದ್ದರು.

ರೈತರ ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ ಪಾತ್ರ ದೊಡ್ಡದಿದೆ. ಹಾಲಿನಲ್ಲಿರುವ ಪೌಷ್ಟಿಕತೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ನಿತಂತರವಾದ ಲಾಭದಾಯಕ ಉದ್ಯೋಗವಾಗಿದೆ. ಜಾನುವಾರುಗಳಿಗೆ ಬೇಕಾದ ಮೇವು ಸ್ವಂತ ಜಮೀನಿನಲ್ಲಿ ಬೆಳೆದಲ್ಲಿ ರೈತರು ಉಳಿತಾಯ ಮಾಡಬಹುದು.
– ಪಿ.ಸಿ.ಗದ್ದಿಗೌಡರ ಸಂಸದ

Leave a Reply

Your email address will not be published. Required fields are marked *