ಬಾಗಲಕೋಟೆ: ರಾಜ್ಯದಲ್ಲಿರುವ ಅನುದಾನಿತ ಇಂಜಿನಿಯರಿಂಗ್ ಕಾಲೇಜು ಸಿಬ್ಬಂದಿಗೆ ಏಳನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಆಗ್ರಹಿಸಿ ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಶಿಕ್ಷಕರ ಅಸೋಸಿಯೇಷನ್ ನೇತೃತ್ವದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಪ್ರಾಧ್ಯಾಪಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಆಳ್ವಿಕೆ ನಡೆಸುವ ಸರ್ಕಾರಗಳು ವೇತನ ತಾರತಮ್ಯ ನೀತಿ ಅನುಸರಿಸುತ್ತಿವೆ. ಇದರಿಂದ ಅನುದಾನಿತ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರಿಗೆ ಅನ್ಯಾಯವಾಗುತ್ತಿದೆ. ಹಲವು ಬಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗುತ್ತಿಲ್ಲ. ಕೇಂದ್ರ ಸರ್ಕಾರ ಏಳನೇ ವೇತನ ಜಾರಿಗೊಳಿಸಿದೆ. ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಏಳನೇ ವೇತನ ಆಯೋಗ ವರದಿ ಅನುಷ್ಠಾನಗೊಳಿಸಬೇಕು., 6ನೇ ಆಯೋಗದ ಬಾಕಿ ವೇತನ ಶೀಘ್ರ ನೀಡಬೇಕು, ಪ್ರತಿತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಧ್ಯಾಪಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಶಿಕ್ಷಕರ ಅಸೋಸಿಯೇಷನ್ ಅಧ್ಯಕ್ಷ ಡಾ.ಶ್ರೀನಿವಾಸ ಬಳ್ಳಿ, ಕಾರ್ಯಾದರ್ಶಿ ರವಿ ಪಾಟೀಲ, ಪ್ರಾಧ್ಯಾಪಕರಾದ ವಿ.ಪಿ. ಗಿರಿಸಾಗರ, ಬಿ.ಎಚ್. ವೆಂಕಣ್ಣ, ಎಸ್.ಎನ್. ಕುರಬೆಟ್ಟ, ಎಸ್.ಜಿ. ಗಣಾಚಾರಿ, ಎಸ್.ಎಚ್. ಜಂಗಮಶೆಟ್ಟಿ ಇತರರು ಪ್ರತಿಭಟನೆಯಲ್ಲಿದ್ದರು.