ಬಂಡಿ ಉತ್ಸವ, ಮತದಾರರ ಜಾತ್ರೆ ಹಮ್ಮಿಕೊಳ್ಳಲು ನಿರ್ಧಾರ

ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಟ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿ.ಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಗಂಗೂಬಾಯಿ ಮಾನಕರ ಹೇಳಿದರು.

ಮಂಗಳವಾರ ಜಿ.ಪಂ ಸಿಇಒ ಅವರ ಕಚೇರಿಯಲ್ಲಿ ಜರುಗಿದ ಸ್ವೀಪ್ ಯೋಜನೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸ್ವೀಪ್ ಯೋಜನೆಯಡಿ ಜನರಲ್ಲಿ ಮತದಾನದ ಜಾಗೃತಿ ಮೂಡಿಸುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸ್ವೀಪ್ ಯೋಜನೆಯಡಿ ವಿವಿಧ ಕಾರ್ಯಕ್ರಮಕ್ಕಗಿ 13 ಲಕ್ಷ ಅನುದಾನ ನೀಡಿದ್ದಾರೆ ಎಂದು ಸಿಇಒ ತಿಳಿಸಿದರು.

ಮತದಾನ ಜಾಗೃತಿಗಾಗಿ ವಾರ್ತಾ ಇಲಾಖೆ ಸಹಯೋಗದಲ್ಲಿ ವಿಶಿಷ್ಟ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಮತದಾರರ ಜಾತ್ರೆ, ಬಂಡಿ ಉತ್ಸವ, ್ಯಾಶನ್ ಶೋ, ಜಾನಪದ ತಂಡಗಳ ಮೆರವಣಿಗೆ, ಪತ್ರಕರ್ತರ ಸಂಘದ ಆಶ್ರಯದಲ್ಲಿ ವಿಚಾರ ಸಂಕಿರಣ ಹಾಗೂ ಜಾಗೃತಿ ಜಾಥಾ, ಸ್ವೀಪ್ ಹಬ್ಬ, ಐತಿಹಾಸಿಕ ಸ್ಥಳಗಳಾದ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲಿನಲ್ಲಿ ಪಾರಂಪರಿಕ ನಡಿಗೆ, ಸೈಕಲ್ ಜಾಥಾ ಸೇರಿದಂತೆ ಗ್ರಾಮೀಣ ಭಾಗದ ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಬೀದಿನಾಟಕ ಹಾಗೂ ಜಾನಪದ ಸಂಗೀತ ಕಲಾತಂಡಗಳಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಮನವಿ ಮಾಡಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ, ಹಾಸ್ಟೇಲ್ ವಿದ್ಯಾರ್ಥಿಗಳ ಮೂಲಕ ಅವರ ಕುಟುಂಬಕ್ಕೆ ಮತದಾನ ಪತ್ರ ಚಳುವಳಿ, ಕಾಲೇಜುಗಳಲ್ಲಿ ಮತದಾನ ಜಾಗೃತಿ ಕುರಿತು ವಿವಿಧ ಸ್ಪರ್ಧೆಗಳು, ಬಸ್ ನಿಲ್ದಾಣಗಳಲ್ಲಿ ಆಡಿಯೋ ಕ್ಲಿಪ್‌ಗಳ ಮೂಲಕ ಜಾಗೃತಿ ಮೂಡಿಸುವದರ ಜೊತೆಗೆ ಜಿಲ್ಲೆಯಲ್ಲಿರುವ ಮಂಗಳಮುಖಿಯರು, ದೇವದಾಸಿಯರು, ಅಂಗವಿಕಲ ಮತದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಸಹ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲೆಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಜಾತ್ರೆಯು ಎಲ್ಲ ಮತಕ್ಷೇತ್ರಗಳಲ್ಲಿ ಸಂಚರಿಸುವ ನಿಟ್ಟಿನಲ್ಲಿ ಸ್ವೀಪ್ ಯಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಈ ಯಾತ್ರೆಗೆ ವಾಹನವನ್ನು ಸಜ್ಜುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. ಅಲ್ಲದೆ ಸ್ವೀಪ್ ಅಡಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ವೈ.ಬಸರಿಗಿಡದ, ಜಿಲ್ಲಾ ಸಾಕ್ಷರತ ಅಧಿಕಾರಿ ಬಸವರಾಜ ಶಿರೂರ ಸಿಇಒ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಾರಕೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎನ್.ಬಿ.ಗೊರವರ ಸೇರಿದಂತೆ ಇತರರು ಉಪಸ್ಥಿತರಿದ್ದರು.