ರಜೆ ನೀಡುವಂತೆ ಆಗ್ರಹಿಸಿ ಉಪನ್ಯಾಸಕರ ಪ್ರತಿಭಟನೆ

ಬಾಗಲಕೋಟೆ: ಪ್ರತಿ ಶೈಕ್ಷಣಿಕ ವರ್ಷದಲ್ಲಿ 60 ದಿನಗಳ ರಜೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಉಪನ್ಯಾಸಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಹಿಂದಿನಿಂದಲೂ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದರೆ 2019ನೇ ಸಾಲಿಗೆ ಮೇ ತಿಂಗಔಲ್ಲಿ 2ನೇ ತಾರೀಖಿನಂದು ದ್ವಿತೀಯ ಪಿಯುಸಿ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಲು ಇಲಾಖೆಯ ಕೈಪಿಡಿಯಲ್ಲಿ ತಿಳಿಸಲಾಗಿದೆ. ಮೇ ತಿಂಗಳಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಗೈರು ಉಳಿಯುತ್ತಾರೆ. ಕೆಲವು ಅಧ್ಯಾಯಗಳ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ. ಹೀಗೆ ಜೂನ್ ತಿಂಗಳಿನಿಂದ ಕಾಲೇಜುಗಳನ್ನು ಆರಂಭಿಸಬೇಕು ಎಂದು ಉಪನ್ಯಾಸಕರು ಆಗ್ರಹಿಸಿದರು.

ವರ್ಷಕ್ಕೆ 60 ದಿನಗಳ ರಜೆ ಪಡೆಯುವ ಉಪನ್ಯಾಸಕರ ಹಕ್ಕು ಚ್ಯುತಿಯಾಗುವುದರಿಂದ ಸಂಘವು ಅನಿವಾರ್ಯವಾಗಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಾಮೂಹಿಕವಾಗಿ ಗೈರು ಹಾಜರಾಗಲು ಕರೆಕೊಡಬೇಕಾಗುತ್ತದೆ. ಶೀಘ್ರ ತಿದ್ದುಪಡಿ ಜ್ಞಾಪನವನ್ನು ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಆರ್.ಎಂ.ಗೌಡರ, ನಾಗರತ್ನ ಸುಬ್ಬಾರೆಡ್ಡಿ, ಮಹೇಶ ಜಕ್ಕಣ್ಣವರ, ಎಂ.ಸಿ.ನರೇಗಲ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.