ಬಾಗಲಕೋಟೆ: ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯಾಚರಣೆ ಕಾರ್ಯಕ್ಕೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರು ಗುರುವಾರ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಈ ಆರ್ಥಿಕ ಗಣತಿಯಲ್ಲಿ ಕೃಷಿ, ಸಾಗುವಳಿ ಹೊರತುಪಡಿಸಿದಂತೆ ಜನತೆಯ ಆದಾಯ ಮೂಲವಾಗಿರುವ ಪ್ರತಿಯೊಂದು ಆರ್ಥಿಕ ಚಟುವಟಿಕೆಗಳ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ, ರಸ್ತೆ ಬದಿಯ ವ್ಯಾಪಾರ ವಹಿವಾಟು ಮುಂತಾದ ಅಸಂಘಟಿತ ವಲಯದ ವ್ಯವಹಾರಗಳೂ ಸೇರಿದಂತೆ ಆಯಾ ಪ್ರದೇಶದ ಅಂಗಡಿ-ಮುಂಗಟ್ಟುಗಳು, ಉದ್ಯಿಮೆ, ಕೈಗಾರಿಕೆ, ವಾಣಿಜ್ಯ ವ್ಯವಹಾರ ಘಟಕಗಳ ಬಂಡವಾಳ ಹೂಡಿಕೆ, ಯಂತ್ರೋಪಕರಣಗಳ ಮೌಲ್ಯ, ಔದ್ಯೋಗಿಕ ಸಾಮರ್ಥ್ಯ ನೋಂದಣಿ ವಿವರಗಳು, ಮುಂತಾದ ಮಾಹಿತಿಯನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಗಣತಿದಾರರು ನಗರ ಪ್ರದೇಶಗಳು ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರತಿಯೊಂದು ಮನೆ, ಉದ್ಯಮಿ, ಕೈಗಾರಿಕೆ, ವ್ಯಾಪಾರ ಮಳಿಗೆ, ಅಂಗಡಿಗಳಿಗೆ ಭೇಟಿ ನೀಡಿ ಗಣತಿ ಕಾರ್ಯವನ್ನು ನಿರ್ವಹಿಸಬೇಕು. ಆರ್ಥಿಕ ಗಣತಿಯಲ್ಲಿ ಸಂಗ್ರಹಿಸುವ ಮಾಹಿತಿಯು ಆಯಾ ಪ್ರದೇಶದ ಜನತೆಯ ಆರ್ಥಿಕ ಸ್ಥಿತಿಗತಿ ಮತ್ತು ಸ್ವಾವಲಂಬನೆಯ ಚಿತ್ರಣವನ್ನು ನೀಡುವಂತಿರಬೇಕು. ಅಲ್ಲದೆ ಪ್ರಸ್ತುತ ಆರ್ಥಿಕ ಗಣತಿ ಮೂಲಕ ಸಂಗ್ರಹಿಸಲಾಗುವ ವಿವರಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಯಾ ಪ್ರದೇಶದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಿ ಜನತೆಯ ಆರ್ಥಿಕ ಸ್ವಾವಲಂಬನೆ ಸಾಧಿಸಲು ಹೊಸ ಯೋಜನೆಗಳನ್ನು ರೂಪಿಸಲು ನೆರವಾಗುತ್ತವೆ ಎಂದು ತಿಳಿಸಿದರು.
ನಗರ ಪ್ರದೇಶದಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆರ್ಥಿಕ ಗಣತಿ ಕ್ಷೇತ್ರ ಕಾರ್ಯಾಚರಣೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸಬೇಕು. ಗಣತಿ ಕ್ಷೇತ್ರ ಕಾರ್ಯಾಚರಣೆಯು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಮಗ್ರವಾಗಿ ಮತ್ತು ಸಂಪೂರ್ಣವಾಗಿ ಪೂರ್ಣಗೊಳ್ಳುವದನ್ನು ಕಾಲಕಾಲಕ್ಕೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಗಣತಿದಾರರು ನಿಖರವಾದ ಮಾಹಿತಿ ಸಂಗ್ರಹಣೆ ಮತ್ತು ನಿಗದಿತ ಕಾಲಾವಧಿಯಲ್ಲಿ ಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರ್ಯೋನ್ಮುಖರಾಗಬೇಕು. ಆರ್ಥಿಕ ಗಣತಿಯ ಮಾಹಿತಿಯನ್ನು ಸಂಗ್ರಹಿಸುವ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಯಾವುದೇ ಕಾರಣಕ್ಕೂ ವಾದ-ವಿವಾದ ವಾಗ್ವಾದಗಳಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಲು ಸಾಮಾನ್ಯ ಸೇವಾ ಕೇಂದ್ರಗಳಿಂದ ನಿಯುಕ್ತಿಗೊಂಡಿರುವ ಗಣತೀದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪವ್ವಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಗಂಗಾಧರ ದಿವಟರ, ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕರಾದ ಸಂತೋಷ.ಪಿ.ಮತ್ತು ಚೇತನ.ಎಂ.ಹಾಗೂ ಇತರರು ಉಪಸ್ಥಿತರಿದ್ದರು.