28 ಗ್ರಾಮಗಳಲ್ಲಿ 207 ಹೆಕ್ಟೇರ್ ಬೆಳೆಹಾನಿ

ಅಶೋಕ ಶೆಟ್ಟರ
ಬಾಗಲಕೋಟೆ:
ಬರದ ಬೇಗೆಗೆ ಬೆಂದಿದ್ದ ಅನ್ನದಾತರಿಗೆ ಇದೀಗ ಸುರಿದ ಅಲ್ಪಮಳೆಯೂ ನಷ್ಟ ಉಂಟು ಮಾಡಿದೆ. ಬೆಳೆದು ನಿಂತಿದ್ದ ತೋಟಗಾರಿಕೆ ಬೆಳೆ ನೆಲಕಚ್ಚಿ 1.63 ಕೋಟಿ ರೂ. ಮೌಲ್ಯದ ಬೆಳೆಹಾನಿಯಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆಯೂ ಆಗದೆ ಕಂಗಾಲಾಗಿದ್ದ ರೈತರಿಗೆ ಮೇ 21 ಮತ್ತು 23ರಂದು ಎರಡು ದಿನ ಸುರಿದ ಮಳೆ ಸ್ವಲ್ಪ ಸಮಾಧಾನ ತಂದರೆ, ಮತ್ತೊಂದೆಡೆ ಮಳೆಯ ಜತೆಗೆ ಬಿದ್ದ ಆಲಿಕಲ್ಲು ಹಾಗೂ ಬೀಸಿದ ಬಿರುಗಾಳಿ ರೈತರಿಗೆ ನಷ್ಟವನ್ನುಂಟು ಮಾಡಿದೆ.

ಜಿಲ್ಲೆಯ 28 ಗ್ರಾಮಗಳಲ್ಲಿ 207.27 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದ್ದು, ಇದರಿಂದ 1.63 ಕೋಟಿ ರೂ. ನಷ್ಟವಾಗಿದೆ ಎಂದು ಇಲಾಖೆ ನಡೆಸಿದ ಪ್ರಾಥಮಿಕ ವರದಿ ತಿಳಿಸಿದೆ. ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವ ಇದೆ ಎನ್ನಲಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಬರ ತಾಂಡವ ನೃತ್ಯ ಮಾಡುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಜಲಮೂಲಗಳೆಲ್ಲ ಖಾಲಿಯಾಗಿವೆ. ಕೊಳವೆಬಾವಿಗಳು ಬತ್ತುತ್ತಿವೆ. ಹೊಸದಾಗಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ತೇವಾಂಶದ ಕೊರತೆಯಿಂದ ಹಾನಿಯಾಗಿ, ನೂರಾರು ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಅಲ್ಪಸ್ವಲ್ಪ ನೀರು ಬಳಕೆ ಮಾಡಿಕೊಂಡು ಬೆಳೆದಿದ್ದ ತೋಟಗಾರಿಕೆ ಬೆಳೆಗಳು ಇದೀಗ ಮಳೆ, ಗಾಳಿಗೆ ಸಿಕ್ಕು ನೆಲಕ್ಕಪ್ಪಳಿಸಿದ್ದು, ರೈತರನ್ನು ಮತ್ತಷ್ಟು ನಷ್ಟದ ಕೂಪಕ್ಕೆ ದೂಡಿದೆ.

ಯಾವ ಬೆಳೆ ಎಷ್ಟು ಹಾನಿ ?
ಮಳೆಯ ಜತೆಗೆ ಭಾರಿ ಪ್ರಮಾಣದಲ್ಲಿ ಗಾಳಿಯೂ ಬೀಸಿದ್ದರಿಂದ ರೈತರು ಬೆಳೆದಿದ್ದ 40.90 ಹೆಕ್ಟೇರ್ ದಾಳಿಂಬೆ, 1.28 ಹೆ. ಮಾವು, 6.89 ಹೆ. ವಿಳ್ಯದೆಲೆ, 0.40 ಹೆ. ದ್ರಾಕ್ಷಿ, 110.90 ಹೆ. ಬಾಳೆ, 32 ಹೆ. ಪಪ್ಪಾಯಿ, 3.50 ಹೆ. ಕಲ್ಲಂಗಡಿ, 11.40 ಹೆ. ತರಕಾರಿ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಪ್ರಾಥಮಿಕ ವರದಿ ಹೇಳುತ್ತಿದೆ.

ಎಲ್ಲೆಲ್ಲಿ ಬೆಳೆ ನಷ್ಟ ?
ಜಿಲ್ಲೆಯ ಬಾಗಲಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು ಬೆಳೆಹಾನಿ ಆಗಿದೆ. ತಾಲೂಕಿನ ಏಳು ಗ್ರಾಮಗಳ 103 ರೈತರ 143 ಹೆಕ್ಟೇರ್ ತೋಟಗಾರಿಕೆ ಬೆಳೆ ನೆಲಕಚ್ಚಿದೆ. ಬಾದಾಮಿ ತಾಲೂಕಿನ 12 ಗ್ರಾಮಗಳಲ್ಲಿ 37 ರೈತರ 31.79 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಆಗಿದೆ. ಮುಧೋಳ ತಾಲೂಕಿನ ಮೂರು ಗ್ರಾಮಗಳಲ್ಲಿ 17 ರೈತರ 20 ಹೆಕ್ಟೇರ್ ಬೆಳೆನಷ್ಟ ಆಗಿದೆ. ಉಳಿದಂತೆ ಬೀಳಗಿ, ಹುನಗುಂದ, ಜಮಖಂಡಿ ತಾಲೂಕಿನಲ್ಲಿ 6 ಗ್ರಾಮಗಳ 13 ರೈತರ 12.48 ಹೆಕ್ಟೇರ್ ಬೆಳೆಹಾನಿ ಆಗಿದೆ.

ಭೀಕರ ಬರದ ಮಧ್ಯೆಯೂ ಕಷ್ಟಪಟ್ಟು ಬಾಳೆ ಬೆಳೆಸಿದ್ದೆವು. ಮೊನ್ನೆ ಮಳೆ ಆದಾಗ ಖುಷಿ ಆಯಿತು. ಆದರೆ, ಮಳೆಯ ಜತೆಗೆ ಭಾರಿ ಪ್ರಮಾಣದ ಗಾಳಿ ಬೀಸಿದ್ದರಿಂದ ಮೂರು ಎಕರೆ ಬಾಳೆ ಸಂಪೂರ್ಣ ನಾಶವಾಗಿದೆ. ಪ್ರತಿ ಎಕರೆಗೆ 40 ಟನ್ ಬಾಳೆ ಬರುತ್ತಿತ್ತು. ಸದ್ಯ ಮಾರುಕಟ್ಟೆಯಲ್ಲಿ ಟನ್‌ಗೆ 14 ಸಾವಿರ ರೂ. ಬೆಲೆ ಇದೆ. ಇದೀಗ ಬೆಳೆಹಾನಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
– ರಾಮು ಯಲ್ಲಟ್ಟಿ ಹಳಂಗಳಿ ಗ್ರಾಮದ ರೈತ.

ಬಿರುಗಾಳಿಯಿಂದಾಗಿ ಜಿಲ್ಲೆಯಲ್ಲಿ 207.27 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದೆ. ಇದಕ್ಕಾಗಿ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರಿಗೆ ಪರಿಹಾರ ವಿತರಿಸಲು 30.21 ಲಕ್ಷ ರೂ. ಬೇಕಾಗುತ್ತದೆ. ಆದರೆ, ವಾಸ್ತವಿಕ ಹಾನಿ 1.63 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
– ಪ್ರಭುರಾಜ ಹಿರೇಮಠ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಬಾಗಲಕೋಟೆ

Leave a Reply

Your email address will not be published. Required fields are marked *