ನರೇಗಾದಡಿ ರೇಷ್ಮೆ ಕೃಷಿ ಅಭಿವೃದ್ಧಿ

ಬಾಗಲಕೋಟೆ: ಜಿಲ್ಲೆಯಲ್ಲಿ ಸತತ ಬರ ಆವರಿಸಿದ್ದು, ಜಿಲ್ಲೆಯ ಜನರಿಗೆ ಉದ್ಯೋಗ ಕಲ್ಪಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಕೃಷಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ರೇಷ್ಮೆ ಕೃಷಿಕರ ಜತೆ ನಡೆಸಿದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೇಷ್ಮೆ ಬೆಳೆಗಾರರ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ವಿವಿಧ ಕಾರ್ಯಕ್ರಮ ರೂಪಿಸಲಾಗಿದ್ದು, ಇದರ ಸೌಲಭ್ಯಗಳ ಮಾಹಿತಿ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ನಿರುದ್ಯೋಗಿಗಳಿಗೆ ಮತ್ತು ರೈತರ ಆರ್ಥಿಕ ಅಭಿವೃದ್ಧಿಗೆ ರೇಷ್ಮೆ ಕೃಷಿ ವರದಾನವಾಗಲಿದೆ. ರೇಷ್ಮೆ ಕೃಷಿಯಿಂದ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಮತ್ತು ನಿರಂತರ ಆದಾಯ ಪಡೆಯಬಹುದಾಗಿದೆ ಎಂದರು.

ನರೇಗಾ ಯೋಜನೆಯಡಿ ಹಿಪ್ಪುನೇರಳೆ ನರ್ಸರಿ ಅಭಿವೃದ್ಧಿಗೆ ಪ್ರತಿ ಎಕರೆಗೆ ಶೇ.40ರಷ್ಟು ಸಾಮಗ್ರಿ ವೆಚ್ಚ ಸೇರಿ 11,952 ರೂ. ನೀಡಲಾಗುವುದು. ಇದರಿಂದ 480 ಮಾನವ ದಿನ ಸೃಷ್ಟಿಸಿದಂತಾಗುತ್ತದೆ. ಹಿಪ್ಪುನೇರಳೆ ನಾಟಿ ಮತ್ತು ಹೊಸ ತೋಟ ಸ್ಥಾಪನೆಗೆ ಪ್ರತಿ ಎಕರೆಗೆ ಶೇ.40ರಷ್ಟು ಸಾಮಗ್ರಿ ವೆಚ್ಚ ಸೇರಿ 49,053 ರೂ. ಸಹಾಯಧನ ನೀಡಲಾಗುವುದು. ಇದನ್ನು 2 ರಿಂದ 3 ವರ್ಷ ನೀಡಲಾಗುವುದು. ಇದರಿಂದ 197 ಮಾನವ ದಿನ ಸೃಷ್ಟಿಯಾಗುತ್ತದೆ. ಹಿಪ್ಪುನೇರಳೆ ಮರಪದ್ಧತಿ ತೋಟ (10*10) ಸ್ಥಾಪನೆಗೆ ಶೇ.40ರಷ್ಟು ಸಾಮಗ್ರಿ ವೆಚ್ಚ ಸೇರಿ ಪ್ರತಿ ಎಕರೆಗೆ 35,607 ರೂ. ಸಹಾಯಧನ ನೀಡಲು ಅವಕಾಶವಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಎಂ. ದೇಶಪಾಂಡೆ ತಿಳಿಸಿದರು.

ಸೌಲಭ್ಯ ಸದುಪಯೋಗ ಪಡೆಯಿರಿ
ಸರ್ಕಾರದ ಈ ಯೋಜನೆ ರೈತರಿಗೆ ವರದಾನವಾಗಿದೆ. ಬೋರ್‌ವೆಲ್ ಬತ್ತಿ ಹೋಗಿದ್ದರೂ ರಿಚಾರ್ಜ್ ಮಾಡಲು 19 ಸಾವಿರ ರೂ., ಭೂಮಿ ಸಮತಟ್ಟು ಮಾಡಲು ಪ್ರತಿ ಹೆಕ್ಟೇರ್‌ಗೆ 20 ಸಾವಿರ ರೂ., ಕೃಷಿ ಹೊಂಡ ನಿರ್ಮಾಣಕ್ಕೆ 91 ಸಾವಿರ ರೂ. ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿವಿಧ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

ಮಾರುಕಟ್ಟೆ ಒದಗಿಸಲು ಆಗ್ರಹ
ವಿವಿಧ ಯೋಜನೆಗಳ ಸೌಲಭ್ಯ ಪಡೆದು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಕೆಲಸವಾಗಬೇಕು. ಮಾರುಕಟ್ಟೆ ವ್ಯವಸ್ಥೆ ಇಲ್ಲದಿದ್ದರೆ ಬೇರೆಡೆ ಹೋಗಿ ಮಾರಾಟ ಮಾಡುವುದರಿಂದ ಕಡಿಮೆ ಬೆಲೆಗೆ ಕೇಳುತ್ತಾರೆ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ರೈತರು ರೇಷ್ಮೆ ಬೆಳೆ ಟ್ರಾನ್ಸ್‌ಪೋರ್ಟ್‌ಗೆ ನೀಡುವ ಸಹಾಯಧನ ಹೆಚ್ಚಿಸಬೇಕು. ಸೋಲಾರ್ ಸಿಸ್ಟಮ್‌ಗೆ ಸಹಾಯಧನ, ಕಬ್ಬಿಗೆ ಎಕರೆಗೆ 50 ಸಾವಿರ ಬೆಳೆಸಾಲ ನೀಡಿದರೆ, ರೇಷ್ಮೆ ಬೆಳೆಗೆ 12 ಸಾವಿರ ರೂ. ನೀಡಲಾಗುತ್ತಿದೆ. ಸಾಲ ಪ್ರಮಾಣ ಹೆಚ್ಚಿಸಬೇಕು ಎಂದು ರೈತರು ಮನವಿ ಮಾಡಿದರು

ಜಿಪಂ ಉಪಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ರೇಷ್ಮೆ ವಲಯಾಧಿಕಾರಿ ಆರ್.ಎಸ್. ಜೋಗೂರ, ಸಿ.ಜಿ. ಪಾಟೀಲ, ರೇಷ್ಮೆ ವಿಸ್ತರಣಾಧಿಕಾರಿ ಬಿ.ಬಿ. ನಡುವಿನಮನಿ ಇತರರು ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ ಮತದಾನ ಕುರಿತು ರೈತರಿಗೆ ಜಾಗೃತಿ ಮೂಡಿಸಿದರು. ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಇದಕ್ಕಾಗಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದ ಬಗ್ಗೆ ಖಚಿತಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ವರ್ಗಾವಣೆಗೆ ಹಾಗೂ ಹೊಸದಾಗಿ ಹೆಸರು ಸೇರ್ಪಡೆಗೆ ಚುನಾವಣೆ ಆಯೋಗ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ರೇಷ್ಮೆ ಕೃಷಿ ಮಾಡುವವರಿಗೆ ನರೇಗಾ ಯೋಜನೆಯಿಂದ ಸಿಗುವ ಸಹಾಯಧನ ಬಳಸಿಕೊಂಡು ರೇಷ್ಮೆ ಕೃಷಿಯನ್ನು ಅಭಿವೃದ್ಧಿ ಪಡಿಸಿ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬಹುದು.
– ಗಂಗೂಬಾಯಿ ಮಾನಕರ ಜಿಪಂ ಸಿಇಒ