ಸೋಗಿನ ಮೆರವಣಿಗೆಯಲ್ಲೂ ದೇಶ ಭಕ್ತಿ !

ಸಂತೋಷ ದೇಶಪಾಂಡೆ

ಬಾಗಲಕೋಟೆ: ತ್ರಿವಿಧ ದಾಸೋಹಿ ಡಾ.ಸಿದ್ಧಗಂಗಾ ಶ್ರೀಗಳು ಬಂದಾರ ಕೈ ಮುಗೀರಿ…ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಮರಳಿ ಮಾತೃ ಭೂಮಿಗೆ ಹೆಜ್ಜೆ ಹಾಕಿ ವೀರಯೋಧ ಅಭಿನಂದನ್‌ಗೆ ಸಲ್ಯೂಟ್ ಕೊಡ್ರೀ..ಚುನಾವಣೆ ಬಂದೈತಿ ಮತದಾನ ಕಡ್ಡಾಯ ಮಾಡ್ರೀ !

ಹೋಳಿ ಹಬ್ಬದ ಅಂಗವಾಗಿ ಬಾಗಲಕೋಟೆ ನಗರದಲ್ಲಿ ನಡೆದ ಸೋಗಿನ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು. ಹಿರಿಯರು, ಯುವಕರು, ಮಕ್ಕಳು ನಾನಾ ವೇಷ ಹಾಕಿಕೊಂಡು ನಡೆಸಿದ ಸೋಗಿನ ಬಂಡಿಗಳ ಮೆರವಣಿಗೆ ಹೋಳಿ ಉತ್ಸವ ಮೆರಗು ಹೆಚ್ಚಿಸುವಂತೆ ಮಾಡಿದೆ.

ಹೋಳಿ ಹಬ್ಬದ ನಿಮಿತ್ತವಾಗಿ 5 ದಿನಗಳ ಕಾಲ ಪ್ರತಿದಿನ ರಾತ್ರಿ ನಡೆಯುವ ಸೋಗಿನ ಮೆರವಣಿಗೆ ಸಹ ವಿಶೇಷತೆಯಿಂದ ನಡೆಯುತ್ತಿದೆ. ಇದು ಹಬ್ಬದ ಸಡಗರ ಇಮ್ಮಡಿಗೊಳಿಸಿದೆ.

ನಮ್ಮ ಸೋಗಿನ ಬಂಡಿ ನಮ್ಮ ಹೆಮ್ಮೆ ಎನ್ನುವ ಘೋಷಣೆ ಅಡಿಯಲ್ಲಿ ಹಳಪೇಟೆಯ(ಮಡು) ಸಾರ್ವಜನಿಕರು ಸಿದ್ಧಪಡಿಸಿದ್ದ ವಿವಿಧ ಪ್ರದರ್ಶನ ಭಕ್ತಿ, ಭಾವದಲ್ಲಿ ತೇಲುವಂತೆ ಮಾಡಿತು. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಮತ್ತೆ ನೆನಪಿಗೆ ಬಂದರು. ಶ್ರೀಗಳ ವೇಷ ಧರಿಸಿದ್ದ ವೀರಭದ್ರಯ್ಯ ಜಂಗಿನ, ವಾಯು ಸೇನೆಯ ವೀರಯೋಧ ಅಭಿನಂದನ್ ವೇಷದಲ್ಲಿ ಕಿರಣ ಬಾಸುಕರ್ ಗಮನ ಸೆಳೆದರು. ಲೋಕಸಭೆ ಚುನಾವಣೆ ಹಿನ್ನೆಲೆ ಸಂಜನಾ ಮಜ್ಜಗಿ, ಶಿವಲೀಲಾ ಹಿರೇಮಠ, ಮದು ಮುರಕ್ಕಾಚಿಟ್ಟಿ ಇತರರು ಮಾಡಿದ ನಮ್ಮ ಮತದಾನ ನಮ್ಮ ಹಕ್ಕು, ಭಾರತದ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಿ ಪ್ರದರ್ಶನ, ಶೌಚಗೃಹ ಬಳಸಿ ಆರೋಗ್ಯ ಉಳಿಸಿ ಜಾಗೃತಿ ಆಕರ್ಷಕವಾಗಿದ್ದವು. ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಮಹಾರಾಜರು, ಮೈಸೂರು ಮಹಾರಾಜರ ವೇಷದಲ್ಲಿ ಯುವಕರು ಮಿಂಚಿಸಿದರು. ಸೋಗಿನ ಬಂದಿಯ ಮೆರವಣಿಗೆ ದೇಶ ಭಕ್ತಿ, ಭಾವ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.

ಬಣ್ಣದೋಕುಳಿ ಆಡುವ ಗಲ್ಲಿಯವರು ಬಣ್ಣದಾಟದ ಹಿಂದಿನ ರಾತ್ರಿ ಸೋಗಿನ ಮೆರವಣಿಗೆ ನಡೆಸುತ್ತಾರೆ. ತುರಾಯಿ ಹಲಗೆಯ ನಿನಾದ ಜತೆಗೆ, ನಿಶಾನೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸೋಗಿನ ಮೆರವಣಿಗೆ ಸಂಚರಿಸುತ್ತದೆ. ಬಹು ವರ್ಷಗಳ ಹಿಂದೆಯೇ ಬಣ್ಣದಾಟ ಮೂರು ದಿನಕ್ಕೆ ಸಿಮಿತಗೊಳಿಸಲಾಗಿದೆ. ಆದರೆ ಸೋಗಿನ ಮೆರವಣಿಗೆ ಯಥಾಪ್ರಕಾರ ಜರುಗುತ್ತದೆ. ಮೊದಲ ದಿನ ಕಿಲ್ಲಾ, ಎರಡನೇ ದಿನ ಹಳಪೇಟೆ, ಮೂರನೇ ದಿನ ಹೊಸಪೇಟೆ, 4ನೇ ದಿನ ಜೈನಪೇಟೆ, 5ನೇ ದಿನ ವೆಂಕಟಪೇಟೆ ಗಲ್ಲಿಯ ಜನರು ಸೋಗಿನ ಮೆರವಣಿಗೆ ಮಾಡುತ್ತಾರೆ. ಸೋಗಿನ ಮೆರವಣಿಗೆ ಸಾಮಾಜಿಕ ಹೋರಾಟ, ದೇಶಭಕ್ತಿ, ಧಾರ್ಮಿಕತೆ, ಭಾವೈಕ್ಯತೆ, ಪೌರಾಣಿಕ ಪರಂಪರೆ ಸಾಕ್ಷೀಕರಿಸುತ್ತದೆ. ರಾತ್ರಿ 11 ಗಂಟೆಗೆ ಆರಂಭಗೊಳ್ಳುವ ಮೆರವಣಿಗೆಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ನೋಡುಲು ಮುಗಿಬೀಳುತ್ತಾರೆ. ಬೆಳಗಿನ ಜಾವ 4 ಗಂಟೆವರೆಗೂ ಮೆರವಣಿಗೆ ನಡೆಯುತ್ತದೆ.

ಈಚಿನ ದಿನಗಳಲ್ಲಿ ಕ್ಷೀಣಿಸಿದ್ದ ಸೋಗಿನ ಮೆರವಣಿಗೆ ಕಳೆದ ಎರಡು ವರ್ಷದಿಂದ ಮರಳಿ ತನ್ನ ವೈಭವ ಪಡೆಯುತ್ತಿರುವುದು ನಗರ ಜನತೆಯಲ್ಲಿ ಹರ್ಷ ತಂದಿದೆ. ಮುಂದಿನ ವರ್ಷದಿಂದ ಹೋಳಿ ಉತ್ಸವಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿ ಎಂದು ಸಾರ್ವಜನಿಕರ ಆಶಯವಾಗಿದೆ.

ಬಾಗಲಕೋಟೆ ಹೋಳಿ ಕೇವಲ ಬಣ್ಣದಾಟಕ್ಕೆ ಸಿಮೀತವಾಗಿಲ್ಲ. ಸೋಗಿನ ಮೆರವಣಿಗೆ ಮೂಲಕ ಸಾಮಾಜಿಕ, ಧಾರ್ಮಿಕ, ದೇಶ ಪ್ರೇಮದ ಸಂಕೇತ ಮೆರೆಯುವಂತೆ ಮಾಡುತ್ತದೆ. ಈಚೆಗಿನ ವರ್ಷಗಳಲ್ಲಿ ಸೋಗಿನ ಮೆರವಣಿಗೆ ಮರೆತು ಹೋಗಿತ್ತು. ಕಳೆದೆರಡು ವರ್ಷದಿಂದ ಮತ್ತೆ ಇದಕ್ಕೆ ಜೀವಕಳೆ ಬಂದಿರುವುದು ಖುಷಿ ತಂದಿದೆ.
ಸಂಜೀವ ವಾಡ್ಕರ ಹೋಳಿ ಆಚರಣೆ ಸಮಿತಿ ಮುಖಂಡ

Leave a Reply

Your email address will not be published. Required fields are marked *