ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ

ಬಾಗಲಕೋಟೆ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಬದಲಾಯಿಸಲು ಹೊರಟಿರುವ ಸಂವಿಧಾನ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗುರುವಾರ ನಡೆದ ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸದಾಕಾಲ ಜಾತಿ ಜಾತಿಗಳ ಮಧ್ಯೆ ಸಂಘರ್ಷ ಹುಟ್ಟು ಹಾಕುವ ಬಿಜೆಪಿಗೆ ಪಾಠ ಕಲಿಸಲು ಏ.23ರಂದು ನಡೆಯುವ ಲೋಕಸಭೆ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಎಸ್.ಸಿ. ಘಟಕದ ನಾಯಕರು ಪ್ರತಿ ಮನೆ ಮನೆಗೆ ಹೋಗಿ ಸಿದ್ದರಾಮಯ್ಯ ಸರ್ಕಾರ ಮಾಡಿದ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಈ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಮತಯಾಚಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಕಾಂಗ್ರೆಸ್ ಪಕ್ಷ ಎಲ್ಲ ಜಾತಿ ಜನಾಂಗದವರನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ, ಅಂಬೇಡ್ಕರ್, ಬಾಬು ಜಗಜೀವನರಾಮ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮಹಿಳೆ ನಾನಾಗಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದಾಗ ಎಲ್ಲ ಸಮಾಜದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರ ಕಷ್ಟ ಕಾರ್ಪಣ್ಯಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಜಾತ್ಯತೀತ ಮನೋಭಾವ ಹೊಂದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.

ಕಾಂಗ್ರೆಸ್ ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಮಾತನಾಡಿ, ಕಾಂಗ್ರೆಸ್ ಪಕ್ಷ ದಲಿತರಿಗಾಗಿ ಸಾಕಷ್ಟು ಅಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದು, ಅವುಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ವೀಣಾ ಕಾಶಪ್ಪನವರ ಪರವಾಗಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಜಿಪಂ ಅಧ್ಯಕ್ಷರಾಗಿದ್ದ ವೇಳೆ ಮಾಡಿದ ಕಾರ್ಯಗಳನ್ನು ಮತದಾರರಿಗೆ ತಿಳಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ತಮ್ಮಣ್ಣ ಮಾಂಗ, ಮುಖಂಡರಾದ ಅಡಿವೆಪ್ಪ ಚಂದಾವರಿ, ಪೀರಪ್ಪ ಮ್ಯಾಗೇರಿ, ವೈ.ವೈ. ತಿಮ್ಮಾಪುರ, ಕೋಣಪ್ಪ ಮೂಗನೂರ, ಸಂಗಮೇಶ ಬಂಡಿವಡ್ಡರ, ಚಂದ್ರಶೇಖರ ರಾಠೋಡ, ಗ್ಯಾನಪ್ಪ ಚಲವಾದಿ, ಶ್ರವಣ ಖಾತೆದಾರ, ಬಲರಾಮ ಚವಾಣ್, ಸತ್ಯಪ್ಪ ದಳವಾಯಿ, ಸುರೇಶ ಮದರಖಂಡಿ, ಶ್ಯಾಂ ಘಾಟಗೆ, ಮುತ್ತಣ್ಣ ಮೇತ್ರಿ, ಶಿವಾನಂದ ಮಾದರ, ಸುರೇಶ ಮನ್ನೇರಿ, ಉದಯ ಕಡಕೋಳ, ಮಹೇಶ ಬೀಳಗಿ, ಅರವಿಂದ ಮನ್ನಿಕೇರಿ ಇತರರು ಇದ್ದರು.

ನಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗೊತ್ತಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಅಗತ್ಯವಿದೆ. ವೀಣಾ ಕಾಶಪ್ಪನವರ ಆಯ್ಕೆಗೆ ಶ್ರಮಿಸಬೇಕು.
– ಎಚ್.ವೈ. ಮೇಟಿ ಬಾಗಲಕೋಟೆ ಮಾಜಿ ಶಾಸಕ