ಎಲ್ಲ ಹಬ್ಬಕ್ಕೆ ಒಂದೇ ವೇದಿಕೆ

ಮುಧೋಳ: ದೇಶೀಯ ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸಲು ವರ್ಷದ ಎಲ್ಲ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಸಂಸ್ಕೃತಿ-ಸಂಭ್ರಮ -2018 ಕಾರ್ಯಕ್ರಮ ಅ.21 ರಂದು ನಗರದ ದಾನಮ್ಮದೇವಿ ದೇವಾಲಯದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಪ್ತಸ್ವರ ಸಂಗೀತ, ನೃತ್ಯ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ ಜ್ಯೋತಿ ಪಾಟೀಲ ಹೇಳಿದರು.

ನಗರದ ಕಾನಿಪ ಕಚೇರಿಯಲ್ಲಿ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಒಟ್ಟು 19 ಸಮುದಾಯದ ಎಲ್ಲ ದೇವರ ಪೂಜೆ ಮಾಡಲಾಗುವುದು. ಶ್ರಾವಣ ಗುಳ್ಳವ್ವ, ಗಣೇಶ ಚತುರ್ಥಿ, ರಕ್ಷಾ ಬಂಧನ, ಸರಸ್ವತಿ ಪೂಜೆ, ನಾಗರ ಪಂಚಮಿ, ಶುಕ್ರಗೌರಿ ಪೂಜೆ, ಗೌರವ್ವ, ಶೀಗವ್ವ ಆಚರಣೆ, ನವರಾತ್ರಿ, ಆಯುಧ ಪೂಜೆ, ವಿಜಯದಶಮಿ, ದೀಪಾವಳಿ, ಬಲಿಪಾಢ್ಯ, ಯುಗಾದಿ, ಸಂಕ್ರಾಂತಿ ಹೀಗೆ ವರ್ಷದಲ್ಲಿ ಬರುವ ಎಲ್ಲ ಸಂಪ್ರದಾಯಗಳ ಆಚರಣೆಗಳನ್ನು ಒಂದೇ ವೇದಿಕೆಯಲ್ಲಿ ಎಲ್ಲ ಸಮುದಾಯದ ಮಹಿಳೆಯರೊಂದಿಗೆ ಆಚರಿಸಲಾಗುತ್ತಿದ್ದು, ಅಂದಾಜು 3 ಸಾವಿರ ಮಹಿಳೆಯರು ಭಾಗವಹಿಸುವರು ಎಂದರು.

ಸಪ್ತಸ್ವರ ಸಂಗೀತ, ನೃತ್ಯ ಸಾಂಸ್ಕೃತಿಕ ಸಂಸ್ಥೆ ನಿರ್ದೇಶಕಿ ಭಾರತಿ ಕತ್ತಿ ಮಾತನಾಡಿ, ಕಾರ್ಯಕ್ರಮಕ್ಕೆ ವಿಜಯಪುರದ ಎಂ.ಬಿ. ಪಾಟೀಲ ಧರ್ಮಪತ್ನಿ ಆಶಾ ಎಂ. ಪಾಟೀಲ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಚಂದನ ಟಿವಿಯ ನಿರ್ಮಲಾ ಎಲಿಗಾರ, ಚಿತ್ರನಟಿ ಮಾಳವಿಕಾ, ಗೋವಿಂದ ಕಾರಜೋಳ ಧರ್ಮಪತ್ನಿ ಶಾಂತಾಬಾಯಿ ಕಾರಜೋಳ, ಸಮಾಜಸೇವಕಿಯರಾದ ಉರ್ಮಿಳಾ ಕಳಸದ, ದ್ರಾಕ್ಷಾಯಣಿ ನಿರಾಣಿ, ಗಂಗೂಬಾಯಿ ಮಾಲಕರ, ಮೀನಾ ಬಡ್ಡಿವಡ್ಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಎಂಎಲ್‌ಸಿ ಆರ್.ಬಿ. ತಿಮ್ಮಾಪುರ ಧರ್ಮಪತ್ನಿ ಶಶಿಕಲಾ ತಿಮ್ಮಾಪುರ, ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ವಿವಿಧ ಗಣ್ಯರು ಆಗಮಿಸುವರು. ಸಪ್ತಸ್ವರ ಸಂಗೀತ, ನೃತ್ಯ ಸಂಸ್ಥೆಯ ಭಾರತಿ ಮಲಘಾಣ, ಶ್ರೀದೇವಿ ಅಂಗಡಿ, ಸವಿತಾ ಅಂಗಡಿ ಇತರರಿದ್ದರು.

ಗ್ರಾಮದ ಸುತ್ತಮುತ್ತಲಿನ ಮಹಿಳೆಯರು ಇಳಕಲ್ಲ ಸೀರೆಯುಟ್ಟು ಕಾರ್ಯಕ್ರಮಕ್ಕೆ ಆಗಮಿಸಬೇಕು. ರನ್ನ ವೃತ್ತದಿಂದ ದಾನಮ್ಮದೇವಿ ದೇವಾಲಯವರೆಗೆ ಮಹಿಳೆಯರ ಕುಂಭಮೇಳ ಮೆರವಣಿಗೆ ನಡೆಯುವುದು.
– ನಿರ್ಮಲಾ ಮಲಘಾಣ ಸಾವರಿನ್ ಶುಗರ್ಸ್‌ ನಿರ್ದೇಶಕಿ