ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಗೆ ಅನುಮತಿ ಪಡೆಯದೇ ಗೈರು ಹಾಜರಾಗಿರುವ ವಿವಿಧ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಆಗಸ್ಟ್ ಮಾಹೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸಭೆಗೆ ಆಯಾ ಇಲಾಖೆ ಅಧಿಕಾರಿಗಳೇ ಹಾಜರಾಗಬೇಕು. ಇಲಾಖೆ ಸಿಬ್ಬಂದಿ ಕಳುಹಿಸುವುದು, ಮಾಹಿತಿ ನೀಡದೆ ಸಭೆಗೆ ಗೈರು ಹಾಜರಾಗುವುದು ಸಲ್ಲ. ಹೀಗೆಯೇ ಮುಂದುವರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಂದಿನ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಇಒಗೆ ಸೂಚಿಸಿದರು.

ತೋಟಗಾರಿಕೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ ಮಾತನಾಡಿ, 2018-19ನೇ ಸಾಲಿನಲ್ಲಿ 157 ಲಾನುಭವಿಗಳು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪ್ರಯೋಜನ ಪಡೆದಿದ್ದು, ಬೀಜ ವಿತರಣೆ ವೇಳೆ ಜನಪ್ರತಿನಿಧಿಗಳ ಗಮನಕ್ಕೆ ತರಲು ಆಯಾ ತಾಲೂಕು ಅಧಿಕಾರಿಗಳಿಗೆ ಸೂಚಿಸಿದಲಾಗಿದೆ ಎಂದರು.
ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛಮೇವ ಜಯತೆ ಆಂದೋಲನ ಮೂಲಕ ವೈಯಕ್ತಿಕ ಶೌಚಗೃಹಗಳ ಬಳಕೆ ಮತ್ತು ಸುಸ್ಥಿರತೆ ಕುರಿತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೇಸ್‌ಲೈನ್ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳಿಗೆ ಶೌಚಗೃಹದ ಸೌಲಭ್ಯ ನೀಡಲಾಗುತ್ತಿದ್ದು, ಇಲ್ಲಿವರೆಗೆ 2269 ಕುಟುಂಬಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ಇನ್ನುಳಿದ ಕುಟುಂಬಗಳಿಗೆ ಸೆಪ್ಟೆಂಬರ್ ಮಾಹೆಯ ಅಂತ್ಯಕ್ಕೆ ಶೌಚಗೃಹ ಸೌಲಭ್ಯ ಕಲ್ಪಿಸಲಾಗುವುದು ಜಿಪಂ ಯೋಜನಾ ನಿರ್ದೇಶಕ ವಿ.ಎಸ್.ಹಿರೇಮಠ ಎಂದು ಸಭೆಗೆ ತಿಳಿಸಿದರು.

ಕೆರೆಗಳ ಸರ್ವೇಗೆ ಸೂಚನೆ
ಸಭೆಯಲ್ಲಿ ಜಿಪಂ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ವಿಜಯಕುಮಾರ.ಎಚ್. ಮಾತನಾಡಿ, ಜಿಲ್ಲೆಯಲ್ಲಿ 158 ಕೆರೆಗಳು ಇದ್ದು, ಪ್ರಸಕ್ತ ಸಾಲಿನಲ್ಲಿ ಕೆರೆ ಸಂಜೀವಿನಿ, ಜಲಾಮೃತ ಯೋಜನೆಯಡಿ ಮತ್ತು ಉದ್ಯೋಗ ಖಾತ್ರಿ ಯೋಜನೆ ಮೂಲಕ ಬಾದಾಮಿ, ಹುನಗುಂದ, ಬೀಳಗಿ ಮತ್ತು ಮುಧೋಳ ತಾಲೂಕಿನಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ವೇಳೆ ಸಿಇಒ ಮೊಹಮ್ಮದ್ ಇಕ್ರಮ್, ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಕೆರೆಗಳ ಒತ್ತುವರಿ ಬಗ್ಗೆ ಸರ್ವೇ ಮಾಡಿಸಬೇಕು. ಇದಕ್ಕೆ ತಡ ಮಾಡಬಾರದು ಎಂದು ಖಡಕ್ ಸೂಚನೆ ನೀಡಿದರು.

ಕುಟುಕು ಕಾರ್ಯಾಚರಣೆ
ಡಿಎಚ್‌ಒ ಡಾ.ಅನಂತ ದೇಸಾಯಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ವೇಳೆ 4 ಜನ ಸೀರೋಗ ತಜ್ಞರು ಕಾರ್ಯನಿರ್ವಹಿಸುತ್ತಿದ್ದು, ಸಿಜೇರಿಯನ್ ಮಾಡುವ ವ್ಯವಸ್ಥೆ ಇದೆ. ತಾಲೂಕು ಮಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಜಿಲ್ಲೆಯ ವಿವಿಧ ಭಾಗದಲ್ಲಿ ಹಣದ ಆಸೆಗೆ ಉದ್ದೇಶ ಪೂರ್ವಕವಾಗಿ ಸಿಜೇರಿಯನ್ ಮಾಡಲಾಗುತ್ತಿದೆ. ಅಂಕಿ, ಸಂಖ್ಯೆಗಳ ಮೂಲಕ ಮುಂದಿನ ಸಾರಿ ವರದಿ ಸಲ್ಲಿಸಬೇಕು. ಹೆಣ್ಣು ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆದಿದೆ ಎಂದು ಆರೋಪಿಸಿದರು. ಇದಕ್ಕೆ ಸಿಇಒ ಇಕ್ರಮ್ ಸಹ ಧ್ವನಿಗೂಡಿಸಿದರು. ಡಿಎಚ್‌ಒ ಡಾ.ಅನಂತ ದೇಸಾಯಿ ಹೆಣ್ಣು ಭ್ರೂಣ ಪರೀಕ್ಷೆ, ಹತ್ಯೆ ನಡೆಯುವ ಬಗ್ಗೆ ಮಾಹಿತಿ ಬಂದಿದೆ. ಕುಟುಕು ಕಾರ್ಯಾಚರಣೆ ಮೂಲಕ ತಪ್ಪಿತಸ್ಥರನ್ನು ಹಿಡಿದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ದಡ್ಡಿ, ಸುಜಾತಾ ಸಿಂಗಾಡೆ, ಶೋಭಾ ಪಾಟೀಲ, ಜಿಪಂ ಉಪಕಾರ್ಯದರ್ಶಿ ಎ.ಜಿ. ತೋಟದ, ಯೋಜನಾ ನಿರ್ದೇಶಕ ವಿ.ಎಸ್. ಹಿರೇಮಠ, ಮುಖ್ಯಲೆಕ್ಕಾಧಿಕಾರಿ ಶಾಂತಾ ಕಡಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪಶುಸಂಗೋಪನೆ ಇಲಾಖೆ ಅಧಿಕಾರಿಗೆ ತರಾಟೆ
ಸಭೆಗೆ ತಡವಾಗಿ ಆಗಮಿಸಿದ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ರವೀಂದ್ರ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಅಧ್ಯಕ್ಷೆ ಬಾಯಕ್ಕ ಮೇಟಿ, ಸಿಇಒ ಮೊಹಮ್ಮದ್ ಇಕ್ರಮ್ ನಿಮ್ಮ ಕಾರ್ಯವೈಖರಿ ಬೇಸರ ತಂದಿದೆ. ಸಭೆಗಳ ನಿರ್ಲಕ್ಷೃ ಧೋರಣೆ ಸಲ್ಲ ಎಂದು ತರಾಟೆಗೆ ತೆಗೆದುಕೊಂಡು ನೋಟಿಸ್‌ಗೆ ಉತ್ತರ ನೀಡುವಂತೆ ಸಭೆಯಿಂದ ಡಾ.ರವೀಂದ್ರ ಹೆಗಡೆ ಅವರನ್ನು ಕಳುಹಿಸಲಾಯಿತು. ಸಭೆಯಲ್ಲಿ ಜೂನ್ ಮಾಹೆಯ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ನಡಾವಳಿಗಳ ಮೇಲಿನ ಅನುಸರಣೆ ವರದಿಯ ಬಗ್ಗೆ ಕಾರ್ಯಕ್ರಮಗಳ ಅನುಷ್ಠಾನಗಳ ಬಗ್ಗೆ ಬಿಸಿಬಿಸಿಯಾಗಿ ಚರ್ಚಿಸಲಾಯಿತು.

Leave a Reply

Your email address will not be published. Required fields are marked *