ಸ್ವಾಭಿಮಾನಿ ಬದುಕು ನಿಮ್ಮದಾಗಲಿ

ಬಾಗಲಕೋಟೆ: ಜನಪ್ರಭುತ್ವ ವ್ಯವಸ್ಥೆಯಲ್ಲಿ ನಿಮಗಿರುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸ್ವಾಭಿಮಾನಿ ಜೀವನ ನಡೆಸುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಪೌರ ಕಾರ್ಮಿಕರಿಗೆ ಸಲಹೆ ನೀಡಿದರು.

ನವನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಾಯಿ ಕರ್ಮಚಾರಿಗಳು, ಮ್ಯಾನುವಲ್ ಸ್ಕಾೃವೆಂಜರ್‌ಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇರುವ ಕಾನೂನು ಮತ್ತು ವಿವಿಧ ಇಲಾಖೆಗಳು ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರ ಮಕ್ಕಳು ತಮ್ಮಂತೆಯೇ ಜೀವನ ನಡೆಸದೆ ದೇಶದ ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು. ಸರ್ಕಾರ ಪೌರ ಕಾರ್ಮಿಕರ ಮಕ್ಕಳಿಗಾಗಿ ಸಾಕಷ್ಟು ಅನುದಾನ ಹಾಗೂ ಯೋಜನೆಗಳನ್ನು ಜಾರಿಗೊಳಿಸಿದ್ದು, ಪೌರ ಕಾರ್ಮಿಕರಿಗ ಇವುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡು ಸುಂದರ ಸಮಾಜ ನಿರ್ಮಾಣ ಮಾಡುತ್ತಿರುವ ಪೌರಕಾರ್ಮಿಕರು ತಮ್ಮ ಜೀವನವನ್ನು ಸುಂದರವಾಗಿಟ್ಟುಕೊಳ್ಳಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಕಡ್ಡಾಯ ಶಿಕ್ಷಣ ಜತೆಗೆ ಉಚಿತ ಪಠ್ಯಪುಸ್ತಕ, ಬಟ್ಟೆ ಹಾಗೂ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರುವಂತೆ ಸಲಹೆ ನೀಡಿದರು.

ಮಲ ಹೊರುವ ಪದ್ಧತಿಯನ್ನು ಸರ್ಕಾರ ಸಂಪೂರ್ಣ ನಿಷೇಧಿಸಿದ್ದು, ಇದನ್ನು ಉಲ್ಲಂಸಿ ಮಲ ಹೊರುವ ಹಾಗೂ ಹೊರಲು ಹೇಳಿದವರಿಗೆ ಶಿಕ್ಷೆ ನೀಡಲಾಗುತ್ತದೆ. ಇಂತಹ ಪದ್ಧತಿ ಕಂಡುಬಂದಲ್ಲಿ ಮಾಹಿತಿ ನೀಡಿ ಅನಿಷ್ಟ ಪದ್ಧತಿ ಸಂಪೂರ್ಣ ತೊಡೆದುಹಾಕಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಬಹಳಷ್ಟು ಪೌರಕಾರ್ಮಿಕರು ಯಾವುದಾದರೊಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಲ್ಲಿ ಹೆಚ್ಚಾಗಿ ಕುಡಿತ, ದುಶ್ಚಟಗಳಿಗೆ ತುತ್ತಾಗಿರುತ್ತಾರೆ. ದುಶ್ಚಟಗಳನ್ನು ಬಿಟ್ಟು ಆರೋಗ್ಯವಂತ ಜೀವನ ಸಾಗಿಸಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ವಸತಿ ನಿಲಯಗಳಲ್ಲಿ ಪೌರಕಾರ್ಮಿಕ ಮಕ್ಕಳಿಗೆ ಸೀಟುಗಳನ್ನು ಮೀಸಲಿರಿಸಿದೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ವಕೀಲ ಶ್ರೀಧರದಾಸ ಅವರು, ಸಾಯಿ ಕರ್ಮಚಾರಿ, ಮ್ಯಾನುವಲ್ ಸ್ಕಾೃವೆಂಜರ್‌ಗಳಿಗೆ ಇರುವ ಕಾನೂನುಗಳ ಬಗ್ಗೆ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಆರ್. ಪವಾರ ಆರೋಗ್ಯ ಕುರಿತು ಹಾಗೂ ಕಾರ್ಮಿಕ ನಿರೀಕ್ಷಕ ಅಶೋಕ ಒಡೆಯರ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಇತರರು ಇದ್ದರು.

ಪೌರಕಾರ್ಮಿಕರು ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಮದುವೆ ಮಾಡುತ್ತಿರುವುದು ಕಂಡುಬರುತ್ತಿದ್ದು, ಬಾಲ್ಯ ವಿವಾಹ ಪದ್ಧತಿ ಸಂಪೂರ್ಣ ಹೋಗಲಾಡಿಸಲು ಮುಂದಾಗಬೇಕು. ಗ್ರಾಮ ಮತ್ತು ನಗರವನ್ನು ಸ್ವಚ್ಛವಾಗಿ ಇಡುವ ಪೌರಕಾರ್ಮಿಕರು ಸ್ವಚ್ಛತಾ ರಾಯಬಾರಿಗಳು. ಪೌರ ಕಾರ್ಮಿಕರ ಮಕ್ಕಳು ದೇಶವಲ್ಲದೆ ವಿದೇಶದಲ್ಲೂ ಶಿಕ್ಷಣ ಪಡೆಯಲು ಸರ್ಕಾರ ವಿದ್ಯಾರ್ಥಿವೇತನ, ಸಾಲ ಸೌಲಭ್ಯ ನೀಡುತ್ತಿದೆ. ಅವುಗಳ ಅರಿವು ಹಾಗೂ ಶಿಕ್ಷಣದ ಕುರಿತು ಪೌರಕಾರ್ಮಿರಲ್ಲಿ ಜಾಗೃತಿ ಅಗತ್ಯವಾಗಿದೆ.
– ಗಂಗೂಬಾಯಿ ಮಾನಕರ ಜಿಪಂ ಸಿಇಒ

 

Leave a Reply

Your email address will not be published. Required fields are marked *