ಡಿಸಿಸಿ ಬ್ಯಾಂಕ್‌ಗೆ 4.94 ಕೋಟಿ ನಿವ್ವಳ ಲಾಭ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಾಕಾರ ಬ್ಯಾಂಕ್‌ಗೆ 2018-19ನೇ ಸಾಲಿನಲ್ಲಿ 4.94 ಕೋಟಿ ರೂ. ನಿವ್ವಳ ಲಾಭವಾಗಿದೆ. ಬ್ಯಾಂಕ್ ಪ್ರಗತಿ ಪಥದಲ್ಲಿದ್ದು, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

2003 ರಲ್ಲಿ 10.45 ಕೋಟಿ ರೂ.ಗಳಿದ್ದ ಷೇರು ಬಂಡವಾಳ 2019 ಮಾರ್ಚ್ 31ಕ್ಕೆ 121.26 ಕೋಟಿಯಾಗಿದೆ. 25.67 ಕೋಟಿ ರೂ. ಇದ್ದ ನಿಧಿಗಳು 200.11 ಕೋಟಿ ರೂ.ವರೆಗೆ ಏರಿಕೆಯಾಗಿವೆ. 227.22 ಕೋಟಿ ರೂ. ಇದ್ದ ಠೇವುಗಳು 2145.61ಕೋಟಿ ರೂ.ವರೆಗೆ ಹೆಚ್ಚಳವಾಗಿದೆ. 341.18 ಕೋಟಿ ರೂ. ಇದ್ದ ದುಡಿಯುವ ಬಂಡವಾಳ ಈಗ 3174.61 ಕೋಟಿ ರೂ.ವರೆಗೆ ಹೆಚ್ಚಳವಾಗಿದೆ. 663.28 ಕೋಟಿ ರೂ. ಸಾಲ ಪಡೆಯಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2250.49 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಕೃಷಿಗೆ 1200.59 ಕೋಟಿ ರೂ., ಕೃಷಿಯೇತರವಾಗಿ 1049.90 ಕೋಟಿ ರೂ.ಸಾಲ ನೀಡಲಾಗಿದೆ. ಸರ್ಕಾರ ಮತ್ತು ಸೂಚಿತ ಸಂಸ್ಥೆಗಳಲ್ಲಿ ವಿವೇಕಯಕ್ತವಾಗಿ 550.56 ಕೋಟಿ ರೂ. ವಿನಿಯೋಗಿಸಲಾಗಿದೆ. ಸದೃಢ ಆರ್ಥಿಕತೆಯೊಂದಿಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದರು.

ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2003ರಲ್ಲಿ ವಿಜಯಪುರ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕವಾಯಿತು. ಅಂದಿನಿಂದ ಇಂದಿನವರೆಗೆ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಆರಂಭದಲ್ಲಿ ಬ್ಯಾಂಕ್ 29 ಶಾಖೆಗಳನ್ನು ಹೊಂದಿತ್ತು. ಈಗ 46 ಶಾಖೆಗಳಿವೆ. ಬ್ಯಾಂಕ್ 194228 ರೈತರಿಗೆ 1045.32 ಕೋಟಿ ರೂ. ಬೆಳೆ ಸಾಲ ನೀಡಿದೆ. 778 ರೈತರಿಗೆ ಪೈಪ್‌ಲೈನ್, ಪಂಪ್‌ಸೆಟ್, ಹೈನುಗಾರಿಕೆ, ಕುರಿ ಸಾಕಣೆ ಸೇರಿ ವಿವಿಧ ಕೃಷಿ ಚಟುವಟಿಕೆಗೆ 53.28 ಕೋಟಿ ರೂ. ಮಾಧ್ಯಮಿಕ ಕೃಷಿ ಸಾಲ ನೀಡಿದೆ. ವಿವಿಧ ಸಕ್ಕರೆ ಕಾರ್ಖಾನೆಗಳು ಹಾಗೂ ಔದ್ಯೋಗಿಕ ಘಟಕಗಳಿಗೆ ಸಮೂಹ ಪಾಲುದಾರ ಬ್ಯಾಂಕ್‌ಗಳ ಯೋಜನೆ ಅಡಿ 904.01 ಕೋಟಿ ರೂ. ಸಾಲ ನೀಡಲಾಗಿದೆ. ನೇಕಾರಿಕೆ ಉದ್ಯೋಗಕ್ಕಾಗಿ 6.37 ಕೋಟಿ ರೂ.ಮಾಧ್ಯಮಿಕ ಹಾಗೂ ದುಡಿಯುವ ಬಂಡವಾಳ ಸಾಲ ನೀಡಲಾಗಿದೆ. 1.32 ಕೋಟಿ ರೂ. ಸ್ವಹಾಯ ಸಂಘಗಳಿಗೆ ಸಾಲ ಒದಗಿಸಲಾಗಿದೆ. 1313 ವಿವಿಧ ಸಹಕಾರಿ ಸಂಘಗಳು ಬ್ಯಾಂಕ್ ಸದಸ್ಯತ್ವ ಪಡೆದುಕೊಂಡಿವೆ. ಈ ಪೈಕಿ 262 ಕೃಷಿ ಪತ್ತಿನ ಸಹಕಾರಿ ಸಂಘಗಳು ಒಳಗೊಂಡಿವೆ ಎಂದು ಸರನಾಯಕ ತಿಳಿಸಿದರು.

ರಾಜ್ಯ ಸರ್ಕಾರದ ಬಡವರ ಬಂಧು ಯೋಜನೆ ಅಡಿ 161 ಫಲಾನುಭವಿಗಳಿಗೆ 11.3 ಲಕ್ಷ ರೂ. ಹಾಗೂ 16 ಸಂಘಗಳ ಫಲಾನುಭವಿಗಳಿಗೆ ಕಾಯಕ ಯೋಜನೆ ಅಡಿ 48.00 ಲಕ್ಷ ರೂ. ಸಾಲ ವಿತರಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಂಘಗಳ ಮುಖಾಂತರ ಗರಿಷ್ಠ 2 ಲಕ್ಷ ರೂ. ವರೆಗೆ ಸಹಾಯ ಧನ ನೀಡುತ್ತಿದ್ದು, ಅದರನ್ವಯ ಈಗಾಗಲೇ 44 ಘಟಕಗಳಿಗೆ 70 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಸಂಘಗಳ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಉಗ್ರಾಣ ನಿರ್ಮಾಣಕ್ಕಾಗಿ ಗರಿಷ್ಠ 2 ಲಕ್ಷ ರೂ. ಅನುದಾನ ನೀಡುತ್ತಿದ್ದು, ಇಲ್ಲಿಯವರೆಗೆ 154 ಸಂಘಗಳಿಗೆ 234 ಲಕ್ಷ ರೂ. ಸಹಾಯಧನ ನೀಡಲಾಗಿದೆ ಎಂದರು.

ಜಿಲ್ಲೆಯ 140732 ರೈತರ 759.98 ಕೋಟಿ ರೂ. ಸಾಲ ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡಿರುವ 1 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬರುತ್ತದೆ. ಈ ಯೋಜನೆಯಡಿ 61471 ರೈತರಿಗೆ ಸರ್ಕಾರದಿಂದ 320.26 ಕೋಟಿ ರೂ.ಬಿಡುಗಡೆಯಾಗಿದೆ. 439.72 ಕೋಟಿ ರೂ. ಬಾಕಿಯಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದುಪುಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಎಂ.ದೇಸಾಯಿ ಸುದ್ದಿಗೋಷ್ಠಿಯಲ್ಲಿ ಇದ್ದರು.

17 ರಂದು ಸರ್ವ ಸಾಧರಣೆ ಸಭೆ
ಬಾಗಲಕೋಟೆ ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಸೆ.17 ರಂದು ಬ್ಯಾಂಕ್‌ನ 17 ನೇ ಸರ್ವ ಸಾಧಾರಣ ಸಭೆ ಹಮ್ಮಿಕೊಳ್ಳಲಾಗಿದೆ. ಬ್ಯಾಂಕ್ ನಿವೃತ್ತ ಸಿಬ್ಬಂದಿಗೆ ಅನುಕೂಲ ಕಲ್ಪಿಸಲು 10 ಕೋಟಿ ರೂ. ಕಾರ್ಫಸ್ ಫಂಡ್ ಮೀಸಲಿಡಲಾಗುತ್ತಿದೆ. ಈಗಾಗಲೇ 8 ಕೋಟಿ ರೂ. ತೆಗೆದಿಡಲಾಗಿದೆ. ಮೂರು ಹೊಸ ಶಾಖೆಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ತಿಳಿಸಿದರು.

Leave a Reply

Your email address will not be published. Required fields are marked *