ಕಾಂಗ್ರೆಸ್ ಗೆದ್ದರೇ ಸಿದ್ದು ಹೇಳಿದಂತೆ ಕೇಳ್ತನೆ..!

ಬಾಗಲಕೋಟೆ: ಹಾವು- ಮುಂಗುಸಿಯಂತಿರುವ ದೇವೇಗೌಡರು, ಸಿದ್ದರಾಮಯ್ಯ ಅವರನ್ನು ಒಂದೇ ಕೊಠಡಿಯಲ್ಲಿ ಮಾತುಕತೆಗೆ ಕೂಡಿಸಬೇಡಿ. ಅರ್ಧ ಗಂಟೆ ಸಭೆ ಮುಗಿಯೋ ಹೊತ್ತಿಗೆ ಎರಡು ಹೆಣಗಳು ಬಿದ್ದಿರುತ್ತವೆ ಎಂದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷೃಗಳು ಮೈತ್ರಿ ಬಗ್ಗೆ ಮಾಜಿ ಡಿಸಿಎಂ ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ಎಸ್ಸಿ,ಎಸ್ಟಿ, ಹಿಂದುಳಿದ ವರ್ಗದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ರೇವಣ್ಣ ಮಾತುಕತೆಗೆ ಹೋಗುತ್ತಾನಂತೆ. ಅವರು ರೇವಣ್ಣನೋ, ರಾವಣನೋ, ಆ ದೇವರಿಗೆ ಗೊತ್ತು ಎಂದು ತಿವಿದ ಅವರು, ರಾಜ್ಯದಲ್ಲಿ 38 ಹಾಗೂ 78 ಸೀಟು ಇಟ್ಟುಕೊಂಡು ಕುಂಟ, ಕುರುಡ ಸೇರಿ ಸರ್ಕಾರ ಮಾಡಿದಂತಿದೆ ಎಂದು ದೋಸ್ತಿ ಸರ್ಕಾರದ ವಿರುದ್ಧ ಛಾಟಿ ಬೀಸಿದರು.

ಚಿಮ್ಮನಕಟ್ಟಿ ಹುಷಾರಾಗಿರಿ:
ಸಿದ್ದರಾಮಯ್ಯ ತಮ್ಮ ಜೀವನದಲ್ಲಿ ಬೇರೊಬ್ಬ ಕುರುಬ ನಾಯಕನನ್ನು ಬೆಳೆಸಿಲ್ಲ. ಈಗ ನೋಡಿ, ಸಚಿವರಾಗಿದ್ದ ಅವರ ಆಪ್ತ ಎಚ್.ವೈ. ಮೇಟಿಗೆ ಬಿಟಿಡಿಎ ಅಧ್ಯಕ್ಷೃ ಮಾಡಿದ್ದಾರೆ. ಸಚಿವರಾಗಿದ್ದವರಿಗೆ ಇಂತಹ ಸಣ್ಣ ಹುದ್ದೆ ಬೆಕಿತ್ತೇ ? ಅದಕ್ಕೆ ಬಾದಾಮಿಯ ಮಾಜಿ ಸಚಿವ, ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರು ಈಗ ಹುಷಾರಾಗಿರಬೇಕು. ನೀವು ಸುಮ್ಮನಿದ್ದರೆ ನಿಮ್ಮನ್ನು ಯಾವುದಾದರೊಂದು ಗ್ರಾಮ ಪಂಚಾಯಿತಿಗೆ ಅಧ್ಯಕ್ಷೃರನ್ನಾಗಿ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯಗೆ ಸವಾಲ್:
ಸಿದ್ದರಾಮಯ್ಯ ಇಂದು, ಮುಂದೆ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. ಸಿಎಂ ಸೀಟು ಅವರ ಮನೆ ಆಸ್ತಿನಾ? ಬಾದಾಮಿ ಬಂದ್ರೇ ಜೈಕಾರ ಹಾಕಲು ಬೆಂಗಳೂರಿನಿಂದಲೇ 20 ಜನರನ್ನು ಕರೆದುಕೊಂಡು ಬರುತ್ತಾರೆ. ಬಾದಾಮಿ ಜನ ಒಳ್ಳೆಯವರು ಗೆಲ್ಲಿಸಿದರು. ಕಾಂಗ್ರೆಸ್ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಬಾಗಲಕೋಟೆ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನೀವು ಹೇಳಿದಂತೆ ಕೇಳುತ್ತೇನೆ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದ ಅವರು, ತಮ್ಮ ಅಧಿಕಾರ ಅವಧಿಯಲ್ಲಿ ಯಾವ ಮಠ, ಮಾನ್ಯಗಳಿಗೂ ಒಂದು ರೂ. ಕೊಡಲಿಲ್ಲ. ನಾವು ಕೊಟ್ಟಷ್ಟು ಕೊಟ್ಟಿದೀನಿ ಅಂತ ಸಾಬೀತು ಪಡಿಸಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದರು.
ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಐದು ವರ್ಷದಲ್ಲಿ ಪ್ರಪಂಚವೇ ತಿರುಗಿ ನೋಡುವಂತೆ ಆಡಳಿತ ನೀಡಿದ್ದಾರೆ ಮೋದಿ. ಪ್ರತಿಯೊಂದು ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೆಂದು ನೋಡಬೇಡಿ. ಮೋದಿ ಅವರೇ ನಮ್ಮ ಅಭ್ಯರ್ಥಿ ಎಂದು ಮತ ಹಾಕಿ ಎಂದು ಮನವಿ ಮಾಡಿದರು.

ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಸಿದ್ದು ಸವದಿ, ಸಿ.ಸಿ. ಪಾಟೀಲ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಪಿ.ಎಚ್. ಪೂಜಾರ, ನಾರಾಯಣಸಾ ಬಾಂಢಗೆ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಗದೀಶ ಗುಡಗುಂಟಿ ಸೇರಿದಂತೆ ಇತರರು ಇದ್ದರು.

ಖಾಲಿ ಕುರ್ಚಿಗಳ ದರ್ಬಾರ್:
ಸಮಾವೇಶಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನರು ಆಗಮಿಸಿರಲಿಲ್ಲ. ಎಲ್ಲಿ ನೋಡಿದರು ಖಾಲಿ ಕುರ್ಚಿಗಳ ದರ್ಬಾರ್ ಜೋರಾಗಿತ್ತು. ಬಿಜೆಪಿ ನಾಯಕರು ಭಾಷಣದ ಉದ್ದಕ್ಕೂ ಕಾಂಗ್ರೆಸ್ ವಿರುದ್ಧ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.

ಕುರುಬ ಸಮಾಜದಲ್ಲಿ ಅನೇಕರಿಗೆ ಸಿದ್ದರಾಮಯ್ಯ ಬಗ್ಗೆ ಮೋಹ ಬಿಟ್ಟಿಲ್ಲ. ನಮ್ಮನ್ನು ಏನಾದರೂ ಮಾಡಬಹುದು ಅಂತ. ಆದರೆ, ಸಿದ್ದರಾಮಯ್ಯ ಅವರು ಬೇರೆ ಯಾವ ಕುರುಬರು ರಾಜಕೀಯದಲ್ಲಿ ಬೆಳೆಯದಂತೆ ನೋಡಿಕೊಂಡಿದ್ದಾರೆ. ಎಲ್ಲ ಇದ್ದ ಸಿದ್ದರಾಮಯ್ಯ ಅವರನ್ನು ಕರೆದು ಕಾಂಗ್ರೆಸ್ ಪಕ್ಷೃ ಸೇರಿಸಿದ್ದ ವಿಶ್ವನಾಥ, ಶ್ರೀನಿವಾಸ ಪ್ರಸಾದ್ ಕೊನೆಗೆ ಏನಾಯಿತು? ಅವರು ಪಕ್ಷೃ ಬಿಟ್ಟು ಹೋಗುವಂತೆ ಮಾಡಿದರು. ಹೀಗಾಗಿ ಸಿದ್ದು ಬಗ್ಗೆ ಕುರುಬರು ಎಚ್ಚರದಿಂದ ಇರಬೇಕು
– ಕೆ.ಎಸ್. ಈಶ್ವರಪ್ಪ ಮಾಜಿ ಡಿಸಿಎಂ