ನಿಮ್ಮ ಕಣ್ಣೀರ ಕಹಾನಿ ಯಾತಕ್ಕೆ ?

ಬಾಗಲಕೋಟೆ: ದೇವೇಗೌಡರ ಕುಟುಂಬದ ಕಣ್ಣೀರ ಕಹಾನಿ ಬಗ್ಗೆ ಮಾಜಿ ಪ್ರಧಾನಿಗೆ ಮಾಜಿ ಡಿಸಿಎಂ ಈಶ್ವರಪ್ಪ ಪ್ರಶ್ನೆಗಳ ಸುರಿಮಳೆ ಮೂಲಕ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಮುಖಂಡ ಈಶ್ವರಪ್ಪ, ದೇವೇಗೌಡ್ರು, ಸಿಎಂ ಕುಮಾರಸ್ವಾಮಿ, ರೇವಣ್ಣ, ಭವಾನಿ, ಪ್ರಜ್ವಲ್ ಗೋಳೋ ಅಂತ ಅಳುತ್ತಿದ್ದಾರೆ. ಆದರೆ, ಅವರು ಕಣ್ಣೀರು ಹಾಕುತ್ತಿರುವುದೇಕೆ ಎನ್ನುವುದು ನನಗೆ ತಿಳೀತಿಲ್ಲ ಎಂದರು.

ಪುಲ್ವಾಮಾದಲ್ಲಿ ಸೈನಿಕರನ್ನು ಉಗ್ರರು ಕಗ್ಗೊಲೆ ಮಾಡಿದ್ದಕ್ಕೆ ಎಂದು ಕಣ್ಣೀರು ಹಾಕಿದರಾ? ಸಿಎಂ ಇದ್ದಾಗಲೂ ರಾಜ್ಯದಲ್ಲಿ ಭೀಕರ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರಲ್ಲ, ಅದಕ್ಕಾಗಿ ಕಣ್ಣೀರು ಹಾಕಿದರಾ ? ಇಲ್ಲ, ಕಳ್ಳ ನೋಟು ಇಟ್ಟುಕೊಂಡವರ ಮೇಲೆ ಐಟಿ ದಾಳಿ ಆಯಿತಲ್ಲ ಅದಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾರಾ? ತಿಳಿಯುತ್ತಿಲ್ಲ. ಹಾಸನ ಮೊಮ್ಮಗನಿಗೆ ಬಿಟ್ಟು ಕೊಟ್ಟಿದ್ದಕ್ಕೆ ಸಂತೋಷ ಪಡಬೇಕಿತ್ತು. ಯಾತಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೋ ನನಗಂತೂ ತಿಳಿಯುತ್ತಿಲ್ಲ ಎಂದು ಗೌಡರ ಕುಟುಂಬದ ವಿರುದ್ಧ ಕಿಡಿಕಾರಿದರು.

ಕುಟುಂಬ ರಾಜಕಾರಣ ಹೇಗಿರುತ್ತೆ ಹೇಳಲಿ
ತಮ್ಮದು ಕುಟುಂಬ ರಾಜಕಾರಣ ಅಲ್ಲ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಹಾಗಾದರೆ ಕುಟುಂಬ ರಾಜಕಾರಣದ ಅಂದರೆ ಏನು ಎಂಬುದನ್ನು ಅವರೇ ಹೇಳಲಿ. ದೇವೇಗೌಡರು ಚುನಾವಣೆಗೆ ನಿಂತಿದ್ದಾರೆ. ಅವರ ಇಬ್ಬರು ಮೊಮ್ಮಕ್ಕಳು ನಿಂತಿದ್ದಾರೆ. ಒಬ್ಬ ಮಗ ಸಿಎಂ, ಇನ್ನೊಬ್ಬ ಮಗ ಪಿಡಬ್ಲ್ಯೂಡಿ ಸಚಿವ, ಓರ್ವ ಸೊಸೆ ಎಂಎಲ್‌ಎ , ಇನ್ನೊಬ್ಬಳು ಜಿಪಂ ಸದಸ್ಯೆ. ಇಷ್ಟಾದರೂ ತಮ್ಮದು ಕುಟುಂಬ ರಾಜಕಾರಣ ಅಲ್ಲ ಎನ್ನುವುದಾದಲ್ಲಿ ಕುಟುಂಬ ರಾಜಕಾರಣ ಹೇಗಿರುತ್ತದೆ ಎಂದವರು ಸ್ಪಷ್ಟಪಡಿಸಲಿ ಎಂದು ಹೇಳಿದರು.

ಟಿಕೆಟ್ ಹಂಚಿಕೆಗೆ ಕೋಟಾ ಇರಬಾರದು
ಯಾವುದೇ ರಾಜಕೀಯ ಪಕ್ಷಗಳು ಜಾತಿ, ಧರ್ಮದ ಕೋಟಾದಡಿ ಟಿಕೆಟ್ ಹಂಚಿಕೆ ಮಾಡುವುದು ಒಳ್ಳೆಯದಲ್ಲ. ಆಯಾ ಕ್ಷೇತ್ರಗಳ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ದೇಶ ಮತ್ತು ಪಕ್ಷ ನಿಷ್ಠರನ್ನು ಅಭ್ಯರ್ಥಿಗಳನ್ನಾಗಿ ಮಾಡಬೇಕು. ಹಿಂದು, ಮುಸ್ಲಿಂ, ಕ್ರಿಶ್ವಿಯನ್ ಎಂದು ಟಿಕೆಟ್ ನೀಡಿದರೆ ದೇಶ ಏನಾಗಬೇಕು ? ಯಾವುದೇ ಕಾರಣಕ್ಕೂ ಕೋಟಾದಡಿ ಟಿಕೆಟ್ ಕೊಡಬಾರದು ಎಂದು ಅಭಿಪ್ರಾಯಪಟ್ಟರು.ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ, ಮುಖಂಡರಾದ ರಾಜು ರೇವಣಕರ, ವೀರಣ್ಣ ಹಳೇಗೌಡರ ಇದ್ದರು.

ಸಿದ್ದು ಸುಳ್ಳುಗಾರ
ಪ್ರಧಾನಿ ನರೇಂದ್ರ ಮೋದಿ ಅವರ ಬಾಯಿ ಬಡಾಯಿ, ಸುಳ್ಳುಗಾರ ಅಂತ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಮೋದಿ ಹೆಸರನ್ನು ತೆಗೆದು ಅಲ್ಲಿ ಸಿದ್ದರಾಮಯ್ಯ ಅವರನ್ನು ಸೇರಿಸಿ ಎಂದರು. ಸಿದ್ದರಾಮಯ್ಯ ಅವರದ್ದು ಬಾಯಿ ಬಡಾಯಿ, ಮಹಾ ಸುಳ್ಳುಗಾರ. ಅವರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕತೆ ಮುಗಿದಿದೆ ಎಂದರು. ಈಗ ಕಾಂಗ್ರೆಸ್‌ನಲ್ಲಿ ನಿಜವಾದ ಕಾಂಗ್ರೆಸ್ಸಿಗರು ಇಲ್ಲ. ಅಲ್ಲಿ ಇರುವವರೆಲ್ಲ ನಕಲಿಗಳು. ಕಾಂಗ್ರೆಸ್ ಹೆಸರು ಹೇಳಿಕೊಳ್ಳುವ ಅಧಿಕಾರ ಪಿಪಾಸುಗಳು ಮಾತ್ರ ಎಂದು ಚುಚ್ಚಿದರು.

Leave a Reply

Your email address will not be published. Required fields are marked *