ಕಾಮಗಾರಿ ವಿಳಂಬ ಸಹಿಸಲ್ಲ

ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಕಾಮಗಾರಿ ಜವಾಬ್ದಾರಿ ಹೊತ್ತಿರುವ ಭೂ ಸೇನಾ ನಿಗಮ, ಲೋಕೋಪಯೋಗಿ, ನಿರ್ವಿುತಿ ಕೇಂದ್ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಬೆಳಗಾವಿ ವಿಭಾಗ ಮಟ್ಟದ ಅನುಷ್ಠಾನಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿ ಎಜೆನ್ಸಿ ಪಡೆದಿರುವವರು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಏಜೆನ್ಸಿ ರದ್ದುಪಡಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಏಜೆನ್ಸಿ ಪಡೆದಿರುವ ಭೂ ಸೇನಾ ನಿಗಮ, ಲೋಕೋಪಯೋಗಿ, ನಿರ್ವಿುತಿ ಕೇಂದ್ರದ ಅಧಿಕಾರಿಗಳು ಕೆಲಸದಲ್ಲಿ ತೀವ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಯೋಜನೆಗಳು ಅನುಮೋದನೆಯಾಗಿ ಅಗತ್ಯ ಅನುದಾನ ಬಿಡುಗಡೆಯಾದರೂ ಅನೇಕ ಭಾಗದಲ್ಲಿ ಕಾಮಗಾರಿಗಳು ಆರಂಭವಾಗಿಲ್ಲ. ಕೆಲವು ಅರ್ಧದಲ್ಲಿ ನಿಂತಿವೆ. ಹೀಗಾದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಭೆಗೆ ಲೋಕೊಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದಕ್ಕೆ ಗರಂ ಆದ ಸಚಿವ ಸಾ.ರಾ.ಮಹೇಶ ಕಾರವಾರದ ಪಿಡಬ್ಲುಡಿ ಎಇಇಯನ್ನು ತರಾಟೆಗೆ ತೆಗೆದುಕೊಂಡರು. ಗದಗ ಜಿಲ್ಲಾ ಪ್ರಭಾರಿ ಪ್ರವಾಸೋದ್ಯಮ ಅಧಿಕಾರಿ ಗೋಗೇರಿ ಸಭೆಗೆ ಹಾಜರಾಗದೆ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೇಕೆ ಎಂದು ಪ್ರಶ್ನಿಸಿದ ಸಚಿವರು ಭಾನುವಾರ ಬೆಳಗ್ಗೆ ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಆದೇಶಿಸಿದರು. ಪ್ರವಾಸೋದ್ಯಮ ಇಲಾಖೆ ಕೆಲಸ ಆಗಬೇಕು. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡುತ್ತೇನೆ. ಉದಾಸೀನ ತೋರಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಧಾರವಾಡ, ಕಾರವಾರ, ಬೆಳಗಾವಿ, ವಿಜಯಪುರ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಗ್ಗೆ ಅಂಕಿ ಸಂಖ್ಯೆವಾರು ವಿವರ ಪಡೆದುಕೊಂಡ ಸಚಿವ ಮಹೇಶ ಮೂರು ವರ್ಷಗಳಿಂದ ವಿಳಂಬವಾಗಿ ಸಾಗುತ್ತಿರುವ ಕಾಮಗಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಏಜೆನ್ಸಿಗಳನ್ನು ರದ್ದುಪಡಿಸಲು ಸೂಚನೆ ಕೊಡಿ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ಅವರಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಎಚ್.ಜಯಾ, ನೋಡಲ್ ಅಧಿಕಾರಿ ಬಸವರಾಜ ಶಿರೂರ, ಬೆಳಗಾವಿ ವಿಭಾಗದ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರದ ಹಣ ಬಡ್ಡಿಗೆ ಇಟ್ಟಿದ್ದೀರಾ:ಭೂಸೇನಾ ನಿಗಮಕ್ಕೆ ಹಣ ಬಿಡುಗಡೆ ಮಾಡಿದರೂ ಪ್ರವಾಸೋದ್ಯಮ ಕಾಮಗಾರಿ ವಿಳಂಬಕ್ಕೆ ಸಿಡಿಮಿಡಿಗೊಂಡ ಸಚಿವ ಮಹೇಶ ನಾಲ್ಕು ವರ್ಷಗಳ ಕಾಲ ಹಣ ಬಳಕೆ ಮಾಡಿಲ್ಲವೇಕೆ. ಸರ್ಕಾರಿ ಹಣವನ್ನು ಇಟ್ಟು ಬಡ್ಡಿ ತೆಗೆದುಕೊಂಡಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಕಾರ ನೀಡಿ ಎಂದು ವಿನಂತಿಸಿದ ಸಚಿವರು, ಐಹೊಳೆಯಲ್ಲಿ ಆಗಿರುವ ಕಿರಿಕಿರಿಯನ್ನು ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಐಹೊಳೆಯಲ್ಲಿ ಕ್ಯಾಂಟೀನ್ ನಡೆಸುವ ವ್ಯಕ್ತಿ ಈಜುಗೊಳ ನಿರ್ವಿುಸಲು ಮುಂದಾಗಿದ್ದಾರೆ. ಅದಕ್ಕೆ ನೀವು ಅಡ್ಡಿ ಪಡಿಸುತ್ತಿದ್ದೀರಿ. ಇದು ಸರಿಯಲ್ಲ ಎಂದರು. ನಿರ್ವಿುತಿ ಕೇಂದ್ರದ ಶಂಕರಲಿಂಗ ಗೋಗಿ, ಉಪ ವಿಭಾಗಾಧಿಕಾರಿ ಎಚ್.ಜಯಾ ಅವರು ಸಹ ತಮಗಾದ ಆಡಳಿತಾತ್ಮಕ ಸಮಸ್ಯೆಯನ್ನು ಸಚಿವರ ಮುಂದೆ ಬಿಚ್ಚಿಟ್ಟರು.

ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ:ಸಚಿವ ಸಾ.ರಾ.ಮಹೇಶ ಶನಿವಾರ ಐಹೊಳೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರನ್ನು ಭೇಟಿ ಮಾಡಿದರು. ಐಹೊಳೆ ಸ್ಥಳಾಂತರ ವಿಷಯ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಯಾವ ಸರ್ಕಾರಗಳು ಇದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ತಾವು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ತಮ್ಮ ಮನವಿಯನ್ನು ಸಿಎಂ ಕುಮಾರಸ್ವಾಮಿ ಗಮನಕ್ಕೆ ತರಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿವಿಧ ಅಧಿಕಾರಿಗಳು ಇದ್ದರು.