ಬಾಗಲಕೋಟೆ: ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ವತಿಯಿಂದ ಜಿಲ್ಲಾಸ್ಪತ್ರೆಗೆ 5 ಟನ್ ಆಕ್ಸಿಜನ್‌ನ್ನು ಕೊಡುಗೆಯಾಗಿ ನೀಡಲಾಯಿತು.
ಗುರುವಾರ ಜಿಲ್ಲೆಗೆ ಆಗಮಿಸಿದ ಆಕ್ಸಿಜನ್ ಟ್ಯಾಂಕರ್‌ನ್ನು ನವನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕೆ.ರಾಜೇಂದ್ರ ಬರಮಾಡಿಕೊಂಡರು. ಧರ್ಮಸ್ಥಳದ ಟ್ರಸ್ಟ್‌ನ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ. ಆಕ್ಸಿಜನ್ ಹಸ್ತಾಂತರಿಸಿದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಮೂಲಕ ಕೋವಿಡ್‌ನಂತಹ ಸಂದರ್ಭದಲ್ಲಿ ರಾಜ್ಯದ ತುಂಬಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಗೆ 5 ಕಾನ್ಸನ್‌ಟ್ರೇಟರ್ ಹಾಗೂ 5 ಟನ್ ಆಕ್ಸಿಜನ್ ಕೊಡುಗೆಯಾಗಿ ನೀಡಿರುವುದು ಸ್ಮರಣೀಯ. ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಕೋವಿಡ್ ಮಹಾಮಾರಿ ಬೇಗನೆ ನಾಶವಾಗಲಿ ಎಂದರು.
ಧರ್ಮಸ್ಥಳ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ. ಮಾತನಾಡಿ, ರಾಜ್ಯದ ತುಂಬಾ ಒಟ್ಟು 3.93 ಕೋಟಿ ರೂ. ಮೌಲ್ಯದ 285 ಕಾನ್ಸನ್‌ಟ್ರೇಟರ್, 20 ವೆಂಟಿಲೇಟರ್, 8 ಹೈಪ್ಲೋ ಮಷಿನ್, 45 ಟನ್ ಆಕ್ಸಿಜನ್, 10 ಸಾವಿರ ಫುಡ್ ಕಿಟ್, ಸ್ಯಾನಿಟೈಸರ್, ಮಾಸ್ಕ್, ಮೆಡಿಷನ್, ಬೆಡ್‌ಶೀಟ್ ಹಾಗೂ 250 ತಾತ್ಕಾಲಿಕ ಆಂಬುಲೆನ್ಸ್ ವ್ಯವಸ್ಥೆ ನಮ್ಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಾಡಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯರಾದ ಪ್ರಕಾಶ ಹಂಡಿ, ರವೀಂದ್ರ ಹಂಡಿ, ರಂಗನಗೌಡರ ದಂಡನ್ನವರ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಧರ್ಮಸ್ಥಳ ಟ್ರಸ್ಟ್ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಯೋಜನಾಧಿಕಾರಿ ಜ್ಯೋತಿ ಜೋಳದ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಪ್ಲಾಂಟ್‌ಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.
