ದೇಶದ ಭದ್ರತೆಗೆ ಮತ್ತೊಮ್ಮೆಬಿಜೆಪಿ ಬೆಂಬಲಿಸಿ

ಬಾಗಲಕೋಟೆ: ಜಾತ್ಯತೀತ ಪಕ್ಷವೆಂದು ಹೇಳಿಕೊಂಡು ತಿರುಗಾಡುವ ಕಾಂಗ್ರೆಸ್‌ನವರು ದೇಶದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ. ಕಾಂಗ್ರೆಸ್ ಜತೆಗೆ ಜೆಡಿಎಸ್ ಕೂಡ ಜಾತಿ ಬೀಜ ಬಿತ್ತುವುದರಲ್ಲಿ ಮುಂದಿದೆ. ಈ ಬಾರಿಯ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಡಿಸಿಎಂ, ಶಾಸಕ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಶಿರೂರ ಗ್ರಾಮದಲ್ಲಿ ಸೋಮವಾರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸರಳ ಸಜ್ಜನ ರಾಜಕಾರಣಿ ಪಿ.ಸಿ ಗದ್ದಿಗೌಡರ ಅವರಿಗೆ ಮತ ನೀಡಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು.

ಸಿದ್ರಾಮಯ್ಯ ಕುರುಬರ ವೋಟು ಅಂತಾರೆ, ದೇವೆಗೌಡರು ಒಕ್ಕಲಿಗರ ವೋಟು ಅಂತಾರೆ. ತಾವೇ ಜಾತಿ ಬಗ್ಗೆ ಮಾತನಾಡಿ ಬಿಜೆಪಿ ಜಾತಿವಾದಿ ಅಂತ ಕರೀತಾರೆ. ಜನರಿಗೆ ಇದೆಲ್ಲ ಅರ್ಥವಾಗಿದೆ. ಎಲ್ಲ ಜಾತಿಗಳಿಗೂ ಮೀರಿದ ನಾಯಕ ನರೇಂದ್ರ ಮೋದಿ. ದೇಶದ ಭದ್ರತೆಗೆ ಮೋದಿ ಅಗತ್ಯವಾಗಿದೆ. ಬಡವರಿಗೆ ಮುಂದುವರಿದ ಜನಾಂಗಕ್ಕೆ ಸಂವಿಧಾನಬದ್ಧವಾದ ಮೀಸಲಾತಿ ಕಲ್ಪಿಸಿದ್ದಾರೆ. 3 ಲಕ್ಷ ಕೋಟಿ ರೂ. ಗಡಿ ಕಾಯುವ ಯೋಧರ ರಕ್ಷಣೆಗೆ ನೀಡಿದ್ದಾರೆ. ಧರ್ಮದ ಉಳಿವಿಗೆ ಹಾಗೂ ದೇಶ ರಕ್ಷಣೆ ಮಾಡುವವರಿಗೆ ಮತ ಹಾಕಿ ಎಂದರು.

ರಾಷ್ಟ್ರದ್ರೋಹ ಮಾಡುವವರಿಗೆ ಪಾಠ ಕಲಿಸಿ, ರಾಜ್ಯದಲ್ಲಿ ಕಳ್ಳರು, ಸುಳ್ಳರು ಒಂದಾಗಿದ್ದಾರೆ. ಮಂಡ್ಯದಲ್ಲಿ ಒಬ್ಬ ಹೆಣ್ಣುಮಗಳನ್ನು ಸೋಲಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬರುತ್ತಾರೆಂದು ಲೇವಡಿ ಮಾಡಿದರು.

ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ದೇಶದ ಭದ್ರತೆ ಅಖಂಡತೆಗಾಗಿ ನರೇಂದ್ರ ಮೋದಿ ಅವರೇ ಅನಿವಾರ್ಯವಾಗಿದ್ದಾರೆ. ನಮ್ಮ ದೇಶದ ಜತೆಗೆ ಕಾಲ ಕೆರೆದು ಜಗಳಕ್ಕೆ ಬರುವ ಪಾಪಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮೋದಿ ಅವರಿಂದ ಮಾತ್ರ ಸಾಧ್ಯ. ಹೀಗಾಗಿ ಪಿ.ಸಿ ಗದ್ದಿಗೌಡರ ಅವರಿಗೆ ಮತ ನೀಡಿ ಎಂದರು.

ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮಾತನಾಡಿ, ನನ್ನ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ರೈಲ್ವೆ ಕಾಮಗಾರಿ, ಹೆದ್ದಾರಿ, ಪ್ರವಾಸೋದ್ಯಮ ಸೇರಿ ಎಲ್ಲ ರೀತಿಯಿಂದ ಅಭಿವೃದ್ಧಿ ಮಾಡಲು ಪ್ರಯತ್ನಿಸಿದ್ದೇನೆ. ಆದರೇ, ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಜ್ವಲ ಯೋಜನೆ, ಆಯುಷ್ಮಾನ್ ಭಾರತ, ಅಮೃತ ಯೋಜನೆ, ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಖಾತೆಗೆ ನೇರ ಜಮಾ ಮಾಡುವ ಮತ್ತಿತರ ಜನೋಪಯೋಗಿ ಯೋಜನೆಗಳನ್ನು ನೀಡಿದ್ದಾರೆ ಎಂದರು.

ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ನಾಯಕರು ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಮಾಜಿ ಶಾಸಕ ಪಿ.ಎಚ್. ಪೂಜಾರ, ಬಿಟಿಡಿಎ ಮಾಜಿ ಅಧ್ಯಕ್ಷ ಸಿ.ವಿ ಕೋಟಿ, ಜಿ.ಎನ್ ಪಾಟೀಲ, ಜಿಪಂ ಸದಸ್ಯ ರಂಗನಗೌಡ ಗೌಡರ, ತಾಪಂ ಸದಸ್ಯರಾದ ಆರ್.ಎಸ್. ಅಂಗಡಿ, ಪರಶುರಾಮ ಛಬ್ಬಿ, ಕೃಷ್ಣಪ್ಪ ಲಮಾಣಿ, ಗ್ರಾಪಂ ಮಾಜಿ ಅಧ್ಯಕ್ಷ ರವಿ ಗಿರಿಜಾ, ಬಿಜೆಪಿ ಘಟಕದ ರಾಜು ರೇವಣಕರ, ಶರಣಪ್ಪ ಯೆಂಡಗೇರಿ, ಕೆ.ಎಂ. ಭಗವತಿ ಸೇರಿ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.

ಬೇವೂರ ಗ್ರಾಮದಲ್ಲಿ ಪ್ರಚಾರ
ತಾಲೂಕಿನ ಬೇವೂರ ಗ್ರಾಮದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಪದಯಾತ್ರೆ ಮೂಲಕ ಮತಯಾಚನೆ ಮಾಡಿದರು.

ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳ ಮುಖಾಂತರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಶೀಘ್ರದಲ್ಲಿ ಸಾಧನೆಗಳ ಪಟ್ಟಿಮಾಡಿ ವಿರೋಧ ಪಕ್ಷದವರ ಮನೆಗೆ ಪೋಸ್ಟ್ ಮಾಡಲಾಗುವುದು. ನಾನು ಪ್ರಚಾರ ಪ್ರಿಯನಲ್ಲ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ವಿರೋಧ ಪಕ್ಷದವರ ಕೊಡುಗೆ ಶೂನ್ಯವಾಗಿದೆ ಎಂದರು.

ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕ ಪಿ.ಎಚ್.ಪೂಜಾರ, ವಿ.ಪ. ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ನಿಂಗಪ್ಪ ಮಾಗನೂರ, ಯಂಕಣ್ಣಗೌಡ ಮಾಗನೂರ, ಗುರಪ್ಪ ಕಲಗಿಡಿ ಸೇರಿ ಇತರರು ಉಪಸ್ಥಿತರಿದ್ದರು.

ರಾಂಪೂರ ಗ್ರಾಮದಲ್ಲಿ ಮತಬೇಟೆ
ರಾಂಪುರ ಗ್ರಾಮದಲ್ಲಿ ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ ಪ್ರಚಾರ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಾವೆಲ್ಲಾ ಜಾತಿವಾದಿಗಳು ಅಲ್ಲ. ನಾವು ರಾಷ್ಟ್ರವಾದಿಗಳು. ಈ ದೇಶದ ಹೆಮ್ಮೆಯ ಮಕ್ಕಳು. ನಾವು ನಮ್ಮ ದೇಶದ ರಕ್ಷಣೆ ನಮ್ಮ ಮೇಲೆ ಇದೆ. ಹೀಗಾಗಿ ದೇಶಭಕ್ತ ನರೇಂದ್ರ ಮೋದಿಯನ್ನು ಮೊತ್ತೊಮ್ಮೆ ಪ್ರಧಾನಿ ಮಾಡೋಣ. ತಾವೆಲ್ಲ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.