ವೀಣಾ ಕಾಶಪ್ಪನವರ ಭರ್ಜರಿ ಪ್ರಚಾರ

ಬಾಗಲಕೋಟೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಮಾಜಿ ಶಾಸಕ ಎಚ್.ವೈ. ಮೇಟಿ ಗುರುವಾರ ನಗರದ ನಂದಿಕೇಶ್ವರ, ಜ್ಯೋತಿ ಕಾಲನಿಯಲ್ಲಿ ಮತಯಾಚಿಸಿದರು.

ಕಾರ್ಯಕರ್ತರು ಅಕ್ಕಾ, ಅಣ್ಣಾ ನಿನ್ನ ವೋಟು ಕಾಂಗ್ರೆಸ್‌ನ ವೀಣಾ ಅಕ್ಕಗೆ ಹಾಕು ಎಂದು ಘೋಷಣೆ ಹಾಕುತ್ತ ಮತಯಾಚಿಸಿದರು. ಮನೆ ಮನೆಗೆ ತೆರಳಿ ಕೇಂದ್ರ ಯುಪಿಎ ಸರ್ಕಾರ ಹಾಗೂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳ ಮತಪತ್ರ ನೀಡಿ ಕಾಂಗ್ರೆಸ್‌ಗೆ ಅಭ್ಯರ್ಥಿಗೆ ಮತ ಹಾಕಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಅಭ್ಯರ್ಥಿ ವೀಣಾ ಕಾಶಪ್ಪನವರ ಜ್ಯೋತಿ ಕಾಲನಿಯ ಶ್ರೀಮಾರುತೇಶ್ವರ ದೇವಸ್ಥಾನ ಹಾಗೂ ನಂದೀಶ್ವರ ನಗರದಲ್ಲಿರುವ ಜಗದ್ಗುರು ಮಳೆರಾಜೇಂದ್ರಸ್ವಾಮಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸದ ಪಿ.ಸಿ. ಗದ್ದಿಗೌಡರ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿಲ್ಲ. ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ ಕೂಡ ಶೂನ್ಯವಾಗಿದೆ. ನಿಮ್ಮ ಮನೆ ಮಗಳು ನಾನು. ಈ ಬಾರಿ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿದರು.

ಅಭ್ಯರ್ಥಿ ವೀಣಾ ಕಾಶಪ್ಪನವರಿಗೆ ಮಹಿಳೆಯರು ಆರತಿ ಮಾಡಿ, ಕುಂಕುಮ ನೀಡಿ ಶುಭ ಕೋರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಜೆಡಿಎಸ್ ಪಕ್ಷದ ಸಲೀಂ ಮೊಮೀನ್, ಶರಣು ಹುರಕಡ್ಲಿ, ಮುಖಂಡರಾದ ನಾಗರಾಜ ಹದ್ಲಿ, ಚನ್ನವೀರ ಅಂಗಡಿ, ಹಾಜಿಸಾಬ ದಂಡೀನ, ವಿನೀತಕುಮಾರ ಮೇಲಿನಮನಿ, ಸಂಗನಗೌಡ ಪಾಟೀಲ, ಸಂಗಮೇಶ ದೊಡಮನಿ, ಶಿವಾನಂದ ಯಾಳಗಿ, ಭೀಮು ಪೂಜಾರಿ, ಸುನೀಲ ದೊಡಮನಿ ಇತರರು ಇದ್ದರು.

Leave a Reply

Your email address will not be published. Required fields are marked *