ಜಿಪಂ ಅಧ್ಯಕ್ಷರಾಗಿ ವೀಣಾ ಕೊಡುಗೆ ಏನು ?

ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಜಿಪಂ ಸಭೆ ನಡೆಸಲು ಆಗದ ಅವರಿಂದ ಅಭಿವೃದ್ಧಿ ಮಾತುಗಳಿಗೆ ಅರ್ಥವಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಸಂಸದ ಪಿ.ಸಿ. ಗದ್ದಿಗೌಡರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ, ಸಂಭಾವಿತ ವ್ಯಕ್ತಿಯಾಗಿರುವ ಅವರು ಅವುಗಳ ಪ್ರಚಾರ ಪಡೆದುಕೊಂಡಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ವೀಣಾ ಕಾಶಪ್ಪನವರ ಮಾತನಾಡುವುದು ಸರಿಯಲ್ಲ. ಈ ಹಿಂದೆ ಅವರ ಮಾವ ಎಸ್.ಆರ್. ಕಾಶಪ್ಪನವರ ಶಾಸಕ, ಸಚಿವರಾಗಿದ್ದರು. ಅತ್ತೆ ಗೌರಮ್ಮ ಹಾಗೂ ಪತಿ ವಿಜಯಾನಂದ ಕಾಶಪ್ಪನವರ ಶಾಸಕರಾಗಿದ್ದರು. ವೀಣಾ ಮೂರು ವರ್ಷ ಜಿಪಂ ಅಧ್ಯಕ್ಷರಾಗಿದ್ದರು. ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಇವರ ಕುಟುಂಬ ಜಿಲ್ಲೆಗೆ ಯಾವ ಕೊಡುಗೆ ನೀಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಸಂಸದ ಪಿ.ಸಿ. ಗದ್ದಿಗೌಡರ ಹುಬ್ಬಳಿ-ಬಾಗಲಕೋಟೆ ಹೆದ್ದಾರಿ, ರೈಲು ಮಾರ್ಗ, ಅಮೃತ ಯೋಜನೆ, ಹೃದಯ ಯೋಜನೆ, ಪಾಸ್‌ಪೋರ್ಟ್ ಕೇಂದ್ರ, ಕೇಂದ್ರೀಯ ವಿದ್ಯಾಲಯ ಸೇರಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಹೇಳಿಕೊಳ್ಳುವಷ್ಟರ ಮಟ್ಟಿಗೆ ಜಿಲ್ಲೆಯ ಅಭಿವೃದ್ಧಿ ಆಗಿಲ್ಲವಾದರೂ ಇನ್ನಷ್ಟು ಪ್ರಗತಿಗಾಗಿ ಹಾಗೂ ಪ್ರಧಾನಿ ನರೇಂದ್ರ ಅವರನ್ನು ಮತ್ತೆ ಪ್ರಧಾನಿಯಾಗಿಸಲು ದೇಶದ ಪ್ರತಿಯೊಬ್ಬ ಪ್ರಜೆ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಏ.4ರಂದು ಮೆರವಣಿಗೆ ಮೂಲಕ ನಾಮಪತ್ರ
ಬಿಜೆಪಿ ಅಭ್ಯರ್ಥಿ ಸಂಸದ ಪಿ.ಸಿ. ಗದ್ದಿಗೌಡರ ಅವರು ಶುಭ ಮುಹೂರ್ತ ಎನ್ನುವ ಕಾರಣಕ್ಕೆ ಏ.1ರಂದು ಐದು ಜನ ಪ್ರಮುಖರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ಏ.4ರಂದು ಜಿಲ್ಲಾ ಕೇಂದ್ರ ಬಾಗಲಕೋಟೆ ನಗರದಲ್ಲಿ ಬಹಿರಂಗ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಾಗುವುದು. ಅಂದು ಮತಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಅಪಾರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕ ಶ್ರೀರಾಮಲು ಸೇರಿ ಇತರರು ಭಾಗವಹಿಸಲಿದ್ದಾರೆ ಎಂದರು.

ವಿ.ಪ. ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ರಾಜು ರೇವಣಕರ, ರಾಜು ನಾಯ್ಕರ, ಜಯಂತ ಕುರಂದವಾಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ಮಾ.31ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ‘ನಾನು ಚೌಕಿದಾರ’ ಎನ್ನುವ ಸಂವಾದ ಕಾರ್ಯಕ್ರಮ ಸಂಜೆ 5 ಗಂಟೆಗೆ ನಡೆಯಲಿದೆ. ಇದರ ನೇರಪ್ರಸಾರ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಆಯೋಜಿಸಲಾಗಿದೆ. ಚೌಕಿದಾರ ಅಭಿಯಾನ ರಾಷ್ಟ್ರವ್ಯಾಪಿ ಸಾಕಷ್ಟು ಪ್ರಭಾವ ಬೀರಿದೆ.
– ವೀರಣ್ಣ ಚರಂತಿಮಠ ಬಾಗಲಕೋಟೆ ಶಾಸಕ

Leave a Reply

Your email address will not be published. Required fields are marked *