Friday, 16th November 2018  

Vijayavani

Breaking News

ಕೋಟೆನಗರಿಯಲ್ಲಿ ಬೃಹತ್ ಯೋಗ ದಿನಾಚರಣೆ

Sunday, 17.06.2018, 6:00 AM       No Comments

ಬಾಗಲಕೋಟೆ: ದೇಹ-ಮನಸ್ಸುಗಳ ನಡುವೆ ಅನ್ಯೋನ್ಯತೆ ಸಾಧಿಸಿ ಭವಿಷ್ಯದ ವಿಶ್ವವನ್ನು ಮತ್ತು ತನ್ಮೂಲಕ ಭಾರತವನ್ನು ಸಶಕ್ತ-ಸದೃಢಗೊಳಿಸುವುದು ವಿಶ್ವಯೋಗ ದಿನಾಚರಣೆ ಮೂಲ ಉದ್ದೇಶ. ಬಿವಿವಿ ಸಂಘ ಹಾಗೂ ವಿಜಯವಾಣಿ, ದಿಗ್ವಿಜಯ ಮಾಧ್ಯಮ ಸಹಯೋಗದಲ್ಲಿ ಜೂ.21 ರಂದು ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗುವುದು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಬಾಗಲಕೋಟೆ ನಗರದ ಮೂರು ಸ್ಥಳಗಳಲ್ಲಿ ವಿಶ್ವ ಯೋಗ ದಿನಾಚರಣೆ ಬಿವಿವಿ ಸಂಘದ ನೇತೃತ್ವದಲ್ಲಿ ನಡೆಯಲಿದ್ದು, ಹಳೇ ಬಾಗಲಕೋಟೆ ನಗರದಲ್ಲಿರುವ ಬಿವಿವಿ ಸಂಘದ ಕ್ರೀಡಾಂಗಣ, ವಿದ್ಯಾಗಿರಿಯಲ್ಲಿರುವ ಬಿವಿವಿ ಇಂಜಿನಿಯರಿಂಗ್ ಕಾಲೇಜ್, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮೈದಾನದಲ್ಲಿ ಯೋಗ ದಿನ ಆಚರಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಿವಿವಿ ಸಂಘದ ಕ್ರೀಡಾಂಗಣದಲ್ಲಿ ತಮ್ಮ ನೇತೃತ್ವದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಶಿಕ್ಷಣ, ಪಾಲಿಟೆಕ್ನಿಕ್, ದಂತ ಮಹಾವಿದ್ಯಾಲಯ, ಔಷಧ ವಿಜ್ಞಾನ, ಮತ್ತಿತರ ಶಾಲೆ ಕಾಲೇಜುಗಳ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯದ ಡಾ.ಸಂಗೀತಾ ಬಳಗಾನೂರ, ಡಾ.ಆರ್.ಬಿ.ಹೊಸಮನಿ, ಡಾ.ಮಲ್ಲಮ್ಮ ಬಾಜಪ್ಪನವರ ನೇತೃತ್ವದ ತಂಡ ಯೋಗ ಪ್ರದರ್ಶನ ನೀಡಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ನವನಗರದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಆವರಣದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯಗಳ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ನೇತೃತ್ವ ವಹಿಸಲಿದ್ದಾರೆ. ಡಾ.ಅಶೋಕ ಬಡಕಲಿ, ಡಾ.ಮೀನಾಕ್ಷಿ ಬಡಕಲಿ, ಡಾ.ಎಸ್.ಎಸ್.ದೊಡಮನಿ, ಡಾ.ನಾಗರಾಜ ಅಂಬಿಗೇರ ಯೋಗ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಸಂಗಣ್ಣ ಕುಪ್ಪಸ್ತ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹೀಗೆ ಮೂರು ಭಾಗದಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಬಿವಿವಿ ಸಂಘದ ಅಡಿಯಲ್ಲಿರುವ ವಿವಿಧ ಗ್ರಾಮೀಣ ಭಾಗದ ಶಾಲೆ, ಕಾಲೇಜುಗಳಲ್ಲಿ ಯೋಗ ದಿನಾಚರಣೆ ನಡೆಯಲಿದೆ ಎಂದು ತಿಳಿಸಿದರು.

ಈ ಯೋಗ ದಿನಾಚರಣೆಯಲ್ಲಿ ಬಿವಿವಿ ಸಂಘದ ವಿವಿಧ ಸಂಸ್ಥೆಗಳು, ಶಾಲೆ, ಕಾಲೇಜುಗಳ ಪ್ರಾಚಾರ್ಯರು, ನಿರ್ದೇಶಕರು, ಸಂಯೋಜಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಸೇರಿ 3 ಸಾವಿರ ಜನ ಮತ್ತು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಯಾ ಕ್ರೀಡಾಂಗಣದಲ್ಲಿ ಜರುಗುವ ವಿಶ್ವ ಯೋಗ ದಿನಾಚರಣೆಯಲ್ಲಿ ಸಾರ್ವಜನಿಕನಿಕರು ಕೂಡ ಪಾಲ್ಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಯೋಗವು ಒತ್ತಡದ ಬದುಕು ನಿಯಂತ್ರಿಸಿ ಆರೋಗ್ಯ ಪೂರ್ಣ ಸಮಾಜ, ಸದೃಢ ಭಾರತ ನಿರ್ವಣಕ್ಕೆ ದಾರಿ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ. ವ್ಯಕ್ತಿ, ಸಮುದಾಯ, ರಾಜ್ಯ, ರಾಷ್ಟ್ರದ ಸಮನ್ವಯಗೊಳಿಸುವುದು, ದೈಹಿಕ ಮತ್ತು ಮಾನಸಿಕ ರೋಗಗಳನ್ನು ಯೋಗಾಭ್ಯಾಸದ ಮೂಲಕ ನಿಯಂತ್ರಿಸಲು ಸಾಧ್ಯವಿದೆ. ಬಿವಿವಿ ಸಂಘದ ವಿದ್ಯಾರ್ಥಿಗಳ ಶಿಕ್ಷಣ-ಶಿಕ್ಷಕೇತರ ಸಿಬ್ಬಂದಿಯ ಆರೋಗ್ಯ, ವೃತ್ತಿ ಕೌಶಲ ಹೆಚ್ಚಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಸಾಕಾರಗೊಳಿಸಲು ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಸುದ್ದಿಗೋಷ್ಠಿಯಲ್ಲಿ ಇದ್ದರು.

ಬಿವಿವಿ ಸಂಘವು ವಿಜಯವಾಣಿ, ದಿಗ್ವಿಜಯ ಮಾಧ್ಯಮ ಸಹಯೋಗದಲ್ಲಿ ಬಾಗಲಕೋಟೆ ನಗರದಲ್ಲಿ ಜೂ.21ರಂದು ಮೂರು ಕಡೆ ಅಯೋಜಿಸಿರುವ ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದು. ಅಂದು ಬೆಳಗ್ಗೆ 6.45 ರಿಂದ 7.45 ಗಂಟೆವರೆಗೆ ಯೋಗ ಪ್ರದರ್ಶನ ನಡೆಯಲಿದೆ. ಆಸಕ್ತರು ಬೆಳಗ್ಗೆ 6.30 ಗಂಟೆ ಒಳಗೆ ಸ್ಥಳದಲ್ಲಿ ಉಪಸ್ಥಿತರಿರಬೇಕು. ಯೋಗದಲ್ಲಿ ಭಾಗವಹಿಸುವವರು ಹಾಸಿಕೊಳ್ಳಲು ಹಾಸಿಗೆ ಹಾಗೂ ಸಡಿಲವಾದ ಬಿಳಿ ಸಮವಸ್ತ್ರ ಧರಿಸಿಕೊಂಡು ಬರಬೇಕು.

ವೀರಣ್ಣ ಚರಂತಿಮಠ, ಬಿವಿವಿ ಸಂಘದ ಕಾರ್ಯಾಧ್ಯಕ್ಷ

 

Leave a Reply

Your email address will not be published. Required fields are marked *

Back To Top