ಬಸವೇಶ್ವರ ಬ್ಯಾಂಕ್ ಜನರ ಜೀವನಾಡಿ

ಬಾಗಲಕೋಟೆ: ರಾಜ್ಯದ ಶ್ರೇಷ್ಠ ಸಹಕಾರಿ ಬ್ಯಾಂಕ್ ಪ್ರಶಸ್ತಿ ಪುರಸ್ಕೃತ, ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಡತ ಬಜಾರ್ ಶಾಖೆ ನವೀಕೃತಗೊಂಡ ಕಟ್ಟಡ ಲೋಕಾರ್ಪಣೆ ಹಾಗೂ ನೂತನ ಎಟಿಎಂ ಸೇವೆ ಚಾಲನೆ ಕಾರ್ಯಕ್ರಮ ಶುಕ್ರವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಚರಂತಿಮಠ ಪ್ರಭು ಸ್ವಾಮೀಜಿ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಜಂಟಿಯಾಗಿ ನವೀಕೃತಗೊಂಡ ಕಟ್ಟಡ ಉದ್ಘಾಟಿಸಿ, ನೂತನ ಎಟಿಎಂಗೆ ಚಾಲನೆ ನೀಡಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಸವೇಶ್ವರ ಸಹಕಾರಿ ಬ್ಯಾಂಕ್ ಬಾಗಲಕೋಟೆ ಜನರ ಜೀವನಾಡಿಯಾಗಿದೆ. ಶತಮಾನದ ಇತಿಹಾಸ ಹೊಂದಿರುವ ಈ ಬ್ಯಾಂಕ್ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಡತ ಬಜಾರ್ ಶಾಖೆಯಲ್ಲಿ ಬಸವೇಶ್ವರ ಬ್ಯಾಂಕ್ ಸಣ್ಣಪುಟ್ಟ ವಹಿವಾಟಿನೊಂದಿಗೆ ಆರಂಭಗೊಂಡು ಇಂದು ದೊಡ್ಡಮಟ್ಟದಲ್ಲಿ ಬೆಳೆದಿದೆ. ಗ್ರಾಹಕರು, ವರ್ತಕರ ಬಹು ದಿನಗಳ ಬೇಡಿಕೆಯಂತೆ ಎಟಿಎಂ ಸೇವೆಗೆ ಚಾಲನೆ ನೀಡಿದ್ದು, ಶಾಖೆಯ ಹಳೇ ಕಟ್ಟಡಕ್ಕೆ ಹೊಸ ರೂಪ ನೀಡಿರುವುದು ಉತ್ತಮ ಕಾರ್ಯ ಎಂದು ಬಣ್ಣಿಸಿದರು.

ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಬಸವೇಶ್ವರ ಬ್ಯಾಂಕ್ ಬಾಗಲಕೋಟೆ ನಗರ ಹಾಗೂ ಜಿಲ್ಲೆಯ ಜನ ಸಾಮಾನ್ಯರ ಆರ್ಥಿಕ ಬಲವರ್ಧನೆಗೆ ಶ್ರಮಿಸುತ್ತಿದೆ. ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ಅನುಕೂಲವಾಗುವ ಸೇವೆಗಳನ್ನು ಒದಗಿಸುತ್ತ ಜನಮನ್ನಣೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ರಾಜ್ಯವ್ಯಾಪಿ ಶಾಖೆಗಳನ್ನು ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ. ವಾಲಿ, ನಿರ್ದೇಶಕರಾದ ಎಸ್.ಸಿ. ಆರಬ್ಬಿ, ಮನೋಹರ ಏಳಮ್ಮಿ, ರವಿ ಪಟ್ಟಣದ, ವೀರಪ್ಪ ಶೀರಗಣ್ಣವರ, ಮುತ್ತು ಜೋಳದ, ಆರ್.ಎಸ್. ದಂಡನ್ನವರ, ಹೂವಪ್ಪ ರಾಠೋಡ, ಶ್ರೀನಿವಾಸ ಬಳ್ಳಾರಿ, ಸುನಿತಾ ಮುಳಗುಂದ, ಅಧಿಕಾರಿ ಪಿ.ಎನ್. ಹಳ್ಳಿಕೇರಿ, ಪ್ರಧಾನ ವ್ಯವಸ್ಥಾಪಕ ಬಿ.ಪಿ. ಬಣಗಾರ, ಶಾಖಾ ವ್ಯವಸ್ಥಾಪಕಿ ರಾಜೇಶ್ವರಿ ಆರ್. ಶೆಟ್ಟರ ಇತರರು ಉಪಸ್ಥಿತರಿದ್ದರು.

ಶತಮಾನದ ಹಿಂದೆ ಬಸವೇಶ್ವರ ಬ್ಯಾಂಕ್ ವಹಿವಾಟು ಆರಂಭಿಸಿದ್ದು, ಇದೇ ಅಡತ ಬಜಾರ್ ಶಾಖೆಯಲ್ಲಿ. ಇದೀಗ ಶತಮಾನದ ಕಟ್ಟಡ ನವೀಕರಣಗೊಳಿಸಲಾಗಿದೆ. ವರ್ತಕರು, ಗ್ರಾಹಕರ ಆಸೆಯಂತೆ ಎಟಿಎಂ ಸೇವೆ ಆರಂಭಿಸಲಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೇವೆ ನೀಡುವಲ್ಲಿ ಬಸವೇಶ್ವರ ಬ್ಯಾಂಕ್ ಸದಾ ಮುಂಚೂಣಿಯಲ್ಲಿದೆ. ಜನಸಾಮಾನ್ಯರ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಕೊಡುಗೆ ನೀಡುತ್ತ ಬಂದಿದೆ. ವರ್ತಕರು, ಗ್ರಾಹಕರ ಬೆಂಬಲದಿಂದ ಪ್ರಗತಿ ಸಾಧಿಸುತ್ತ ಬಂದಿದೆ.
– ಪ್ರಕಾಶ ತಪಶಟ್ಟಿ ಅಧ್ಯಕ್ಷರು, ಬಸವೇಶ್ವರ ಬ್ಯಾಂಕ್

Leave a Reply

Your email address will not be published. Required fields are marked *