ಕಸ ವಿಲೇವಾರಿ, ವಿಂಗಡನೆಗೆ ಗಮನ ಕೊಡಿ

ಬಾಗಲಕೋಟೆ: ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. 2014ರಲ್ಲಿ ಗಾಂಧಿ ಜಯಂತಿ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚಾಲನೆ ನೀಡಿರುವ ಈ ಅಭಿಯಾನದಿಂದ ಜನರಲ್ಲಿ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡುತ್ತಿದೆ ಎಂದು ಜನಶಿಕ್ಷಣ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ವಿ.ಜಿ. ಕಿರಗಿ ಹೇಳಿದರು.

ಬಿವಿವಿ ಸಂಘದ ಜನಶಿಕ್ಷಣ ಸಂಸ್ಥೆಯಿಂದ ಇತ್ತೀಚಿಗೆ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸ್ವಚ್ಛತಾ ಅಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2019ರ ವೇಳೆಗೆ ಭಾರತವನ್ನು ಸಂಪೂರ್ಣ ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಲಾಗಿತ್ತು. ಐದು ವರ್ಷಗಳಲ್ಲಿ 4041 ಪಟ್ಟಣ ಮತ್ತು ಗ್ರಾಮಗಳನ್ನು ಸ್ವಚ್ಛಗೊಳಿಸುವ ಉದ್ದೇಶ ಇದರಲ್ಲಿ ಅಡಗಿದೆ. ಈ ಅಭಿಯಾನದಲ್ಲಿ ಸರಾಸರಿ 2.5 ಕೋಟಿಗೂ ಅಧಿಕ ಶೌಚಗೃಹ ನಿರ್ಮಾಣ ಆಗಿದ್ದು, ವೈಯಕ್ತಿಕ, ಸಮುದಾಯ ನೆಲೆಯಲ್ಲಿ ಜಾಗೃತಿ ಮೂಡುತ್ತಿದೆ.
ಇಂದೋರ್ (ಮಧ್ಯಪ್ರದೇಶ) ಮೊದಲ ಸ್ವಚ್ಛ ನಗರವೆಂದು ಘೋಷಣೆ ಆಗಿದೆ. ಅಲ್ಲಿ ಅನುಸರಿಸುತ್ತಿರುವ ರೂಢಿಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ವಿಶೇಷವಾಗಿ ಕಸ ವಿಲೇವಾರಿ ಮತ್ತು ವಿಂಗಡನೆ ಕಡೆ ಗಮನಹರಿಸಿ, ನಮ್ಮ ಮಕ್ಕಳಿಗೂ ಈ ನೆಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕೆಂದರು.

ಡಾ. ಟಿ.ಎಂ. ನಾಗರತ್ನ ಮಾತನಾಡಿ, ಸ್ವಚ್ಛ ಭಾರತ ಕಾರ್ಯಕ್ರಮದ ಉದ್ದೇಶ ಹಾಗೂ ಜನಶಿಕ್ಷಣ ಸಂಸ್ಥೆಯಿಂದ ಹತ್ತು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮದ ಕುರಿತು ವಿವರಿಸಿದರು.

ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ವಿಜಯಲಕ್ಷ್ಮೀ ಹೊಸಕೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಎಸ್.ಎಚ್. ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ಡಾ.ಜೆ.ವಿ ಚವಾಣ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *