ಬಾಗಲಕೋಟೆಯಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ನಾಳೆ

>

ಬಾಗಲಕೋಟೆ: ನಗರದಲ್ಲಿ ಅ.21 ರಂದು ನಗರ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ಆರ್‌ಎಸ್‌ಎಸ್ ಪಥ ಸಂಚಲನವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ನಡೆದ ಶಾಂತತೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಆರ್‌ಎಸ್‌ಎಸ್ ಪಥ ಸಂಚಲನವನ್ನು ಎಲ್ಲ ಸಮುದಾಯದವರು ಪರಸ್ಪರ ಸೌಹಾರ್ದತೆ, ಸದ್ಭಾವನೆಯಿಂದ ಆಚರಿಸುವ ಜತೆಗೆ ನಗರದಲ್ಲಿ ವ್ಯಕ್ತಿಗತವಾಗಿ ಯಾರ ಭಾವನೆಗೂ ಧಕ್ಕೆ ತರಬಾರದು. ಅಲ್ಲದೆ, ಕೋಮು ಸೌಹಾರ್ದತೆ ಕದಡುವ ಘೋಷಣೆ ಹಾಗೂ ಭಾವಚಿತ್ರವುಳ್ಳ ಬಂಟಿಂಗ್ಸ್, ಬ್ಯಾನರ್ ಹಾಕದಂತೆ ಕಟ್ಟುನಿಟ್ಟಾಗಿ ಸೂಚಿಸಿದರು.

ನಗರಸಭೆಯು ಪಥ ಸಂಚಲನದ ಮಾರ್ಗ ಸ್ವಚ್ಛತೆಗೊಳಿಸಬೇಕು. ರಸ್ತೆಯಲ್ಲಿನ ತಗ್ಗು ದಿನ್ನೆ ಮುಚ್ಚಿಸಬೇಕು. ಬಸವೇಶ್ವರ ವೃತ್ತದ ಸುತ್ತ ಮತ್ತು ಭದ್ರತೆ ಇಲ್ಲದ ಕಟ್ಟಡಗಳ ಮೇಲೆ ಸಾರ್ವಜನಿಕರು ನಿಂತು ಪಥಸಂಚಲನ ವೀಕ್ಷಿಸದಂತೆ ಸ್ವಯಂ ಸೇವಕರು ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಪಥ ಸಂಚಲನದ ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಬೇಕು. ಯಾರ ಭಾವನೆಗೆ ಧಕ್ಕೆ ತರುವಂತಹ ಘೋಷಣೆ ಕೂಗಬಾರದು. ಬಹಳಷ್ಟು ಜನಸಂದಣಿ ಸೇರುವ ಬಸವೇಶ್ವರ ವೃತ್ತದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುವುದು ಎಂದರು.

ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಡಾ.ಸಿ.ಎಸ್. ಪಾಟೀಲ ಪಥಸಂಚಲನ ಕುರಿತು ರೂಪುರೇಷಗಳ ಬಗ್ಗೆ ತಿಳಿಸಿದರಲ್ಲದೆ, ಅಂದಾಜು 2 ಸಾವಿರ ಜನ ಘನವೇಶ ಧಾರಿಗಳು ಭಾಗವಹಿಸಲಿದ್ದು, ಸಂಜೆ 4.15 ಗಂಟೆಗೆ ಎರಡು ಮಾರ್ಗದಲ್ಲಿ ಪಥಸಂಚಲನ ಸಂಚರಿಸಿ ಬಸವೇಶ್ವರ ಮಹಾವಿದ್ಯಾಲಯದ ಮೈದಾನಕ್ಕೆ ಸೇರಲಿವೆ ಎಂದರು.