ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಬಾಗಲಕೋಟೆ: ಬಾಲ್ಯವಿವಾಹ ತಡೆಗೆ ಇರುವ ಕಾಯ್ದೆಗಳನ್ನು ಚಾಚೂ ತಪ್ಪದೇ ಸಂಬಂಧಪಟ್ಟ ಅಧಿಕಾರಿಗಳು ಅನುಷ್ಠಾನಗೊಳಿಸುವಂತೆ ಬಾಲ್ಯವಿವಾಹ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಬಾಲ್ಯವಿವಾಹ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯವಿವಾಹ ನಿಷೇಧಕ್ಕೆ ಇರುವ ಕಾನೂನುಗಳನ್ನು ಅಧಿಕಾರಿಗಳು ಚಾಚೂ ತಪ್ಪದೇ ಅನುಷ್ಠಾನಗೊಳಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ನಡೆಸಿ ಬಾಲ್ಯವಿವಾಹ ನಡೆಯದಂತೆ ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು. 1098 ಮಕ್ಕಳ ಸಹಾಯವಾಣಿ, ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಪ್ರತಿ ಶಾಲೆಯ ಗೋಡೆಗಳ ಮೇಲೆ ಗೋಡೆ ಬರಹ ಬರೆಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಾಲ್ಯವಿವಾಹ ನಿಷೇಧ ಕಾಯ್ದೆ 2016ರ ಪ್ರಮುಖಾಂಶಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಬಾಲ್ಯವಿವಾಹ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು. ಇಲ್ಲವೆ ಬಾಲ್ಯವಿವಾಹ ನಿಷೇಧಾಧಿಕಾರಿಗಳಾದ ಗ್ರಾಮ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಾಲೆ ಮುಖ್ಯೋಪಾಧ್ಯಾಯರು, ಕಂದಾಯ ನಿರೀಕ್ಷಕರು, ಹೆಲ್ತ್ ಇನ್ಸ್‌ಪೆಕ್ಟರ್, ಕಾರ್ಮಿಕ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರಿಗೆ ದೂರು ನೀಡಬಹುದಾಗಿದೆ. ಬಾಲ್ಯವಿವಾಹ ಕಂಡು ಬಂದಲ್ಲಿ ಮದುವೆ ಗಂಡಿಗೆ, ಪೋಷಕರಿಗೆ, ಬೆಂಬಲ ನೀಡಿದವರಿಗೆ 2 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಸಾಮೂಹಿಕ ವಿವಾಹಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಬಾಲ್ಯ ವಿವಾಹವಾಗದಂತೆ ನೋಡಿಕೊಳ್ಳುವುದರ ಜತೆಗೆ ಜನನ ಪ್ರಮಾಣ ಪತ್ರ, ಶಾಲೆ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪರಿಶೀಲಿಸತಕ್ಕದ್ದು. ಜಿಲ್ಲಾ ಶಸ ಚಿಕಿತ್ಸಕರ ಕಚೇರಿಯಿಂದ ನೀಡಿದ ವಯೋ ಪ್ರಮಾಣ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. 2018-19 ರಲ್ಲಿ ಒಟ್ಟು 39 ಪ್ರಕರಣಗಳಲ್ಲಿ ವಯೋ ಪ್ರಮಾಣ ಪತ್ರ ನೀಡಲಾಗಿದೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ಶಾಲೆ ಪ್ರಮಾಣ ಪತ್ರಕ್ಕಿಂತ ಕಡಿಮೆ ವಯಸ್ಸು ಇದ್ದಿದ್ದು ಕಂಡು ಬಂದಿದೆ. ಒಟ್ಟು 39 ಪ್ರಮಾಣ ಪತ್ರಗಳು ನಿಗದಿತ ನಮೂನೆಯಲ್ಲಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ತಿಂಗಳು ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮದುವೆ ಕಾರ್ಡ್‌ಗಳನ್ನು ಪ್ರಿಂಟ್ ಮಾಡುವಾಗ ವಧು-ವರರ ಜನನ ಪ್ರಮಾಣ ಪತ್ರವನ್ನು ಪಡೆದುಕೊಂಡು ಅದು ಬಾಲ್ಯವಿವಾಹವಲ್ಲವೆಂದು ಖಚಿತಪಡಿಸಿಕೊಂಡ ನಂತರವೇ ಲಗ್ನ ಪತ್ರಿಕೆ ಮುದ್ರಣ ಮಾಡುವಂತೆ ಜಿಲ್ಲೆಯ ಮುದ್ರಣಾಲಯಗಳಿಗೆ ಪತ್ರ ಬರೆಯುವುದಾಗಿ ಡಿಸಿ ಹೇಳಿದರು.

ಸಭೆಯಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ ಎನ್.ಬಿ.ಗೊರವರ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಯಶ್ರೀ ಎಮ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಚ್.ಗೋನಾಳ, ಡಿವೈಎಸ್‌ಪಿ ಎಂ.ಕೆ.ಗಂಗಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸೇರಿ ಇತರರು ಉಪಸ್ಥಿತರಿದ್ದರು.