ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ

ಬಾಗಲಕೋಟೆ: ನೆರೆಯಿಂದ ಸಂಕಷ್ಟಕ್ಕೊಳಗಾದ ಜನರಿಗೆ ಪರಿಹಾರ ಒದಗಿಸಲು ಸರ್ಕಾರ ವಿಶೇಷ ಗಮನ ಹರಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ ಸೂಚಿಸಿದರು.

ಯುಕೆಪಿ ಸಭಾಭವನದಲ್ಲಿ ಮಂಗಳವಾರ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹದಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ. ಪರಿಹಾರ ಕೇಂದ್ರಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಊಟ, ಜಾನುವಾರುಗಳಿಗೆ ಮೇವು, ಆರೋಗ್ಯ ಸೌಲಭ್ಯಗಳ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆ ನಲುಗಿದೆ. ಮನೆಗಳು, ಆಸ್ತಿ-ಪಾಸ್ತಿ ಜಾನುವಾರು ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ, ರಸ್ತೆ ಹಾನಿಗೊಳಗಾಗಿದ್ದು, ಸಂತ್ರಸ್ತರಿಗೆ ಈವರೆಗೆ ನೀಡಲಾದ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರ ಕಾಲಕಾಲಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದೆ. ಅಗತ್ಯ ಬೇಡಿಕೆಗಳ ಬಗ್ಗೆ ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಕೊಡಬೇಕು. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ, ಜಿಲ್ಲೆಯಲ್ಲಿ 195 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, 43136 ಕುಟುಂಬ ಮತ್ತು 69977 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಪ್ರಸ್ತುತ 7 ಪರಿಹಾರ ಕೇಂದ್ರಗಳು ಚಾಲ್ತಿಯಲ್ಲಿದ್ದು, 818 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಗುರುತಿಸಲಾದ ಸಂತ್ರಸ್ತರ ಕುಟುಂಬಗಳು 45997 ಇದ್ದು, ಎಲ್ಲ ಕುಟುಂಬಗಳಿಗೆ 10 ಸಾವಿರ ರೂ. ತಾತ್ಕಾಲಿಕ ಪರಿಹಾರಧನವನ್ನು ಆರ್‌ಟಿಜಿಎಸ್ ಮೂಲಕ ಖಾತೆಗೆ ಜಮಾ ಮಾಡಲಾಗಿದೆ. 47008 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ. ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಪೈಕಿ 98 ಗ್ರಾಮಗಳು ಯುಕೆಪಿ ವ್ಯಾಪ್ತಿಗೆ ಒಳಪಡುತ್ತಿದ್ದು, ವಿವಿಧ ಯೋಜನೆಗಳಲ್ಲಿ ಪ್ರಯೋಜನ ಪಡೆದ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಮನೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

2009ರಲ್ಲಿ ಉಂಟಾದ ಪ್ರವಾಹದ ವೇಳೆ ಪರಿಹಾರ ಪಡೆದು ಈ ಬಾರಿಯೂ ಹಾನಿ ಅನುಭವಿಸಿದಲ್ಲಿ ಅಂತವರಿಗೆ ಪುನಃ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ ಹಕ್ಕುಪತ್ರ ನೀಡದಿರುವವರಿಗೆ ಮಾತ್ರ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದರು. ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಶಿವಯೋಗಿ ಕಳಸದ ತಿಳಿಸಿದರು.

ಜಿಪಂ ಸಿಇಒ ಮೊಹಮ್ಮದ್ ಇಕ್ರಮ್, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಹಾನಿಗೊಳಗಾದ ಶಾಲಾ ಕಟ್ಟಡ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿ ಇತರ ಹಾನಿಯ ಮಾಹಿತಿಯನ್ನು ಸಭೆಗೆ ನೀಡಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿಗಳಾದ ಗರಿಮಾ ಪವ್ವಾರ, ಪ್ರಕಾಶ ಸಿ., ಯುಕೆಪಿಯ ಉಪ ಮಹಾವ್ಯವಸ್ಥಾಪಕ ಎಸ್.ಎಂ. ಉಕ್ಕಲಿ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕಲಾದಗಿ ಬಗ್ಗೆ ಬಿಸಿ ಬಿಸಿ ಚರ್ಚೆ
ಕಲಾದಗಿ ಗ್ರಾಮದ ಪುನರ್ವಸತಿ ಕೇಂದ್ರ ಪೂರ್ಣಗೊಳ್ಳದಿರುವುದರಿಂದ ಸಂತ್ರಸ್ತರಿಗೆ ಪೂರ್ಣಪ್ರಮಾಣದ ಪುನರ್ವಸತಿ ಕಲ್ಪಿಸದ ಕಾರಣ 1997ರಲ್ಲಿಯೇ ಅಲ್ಲಿನ ಜನರಿಗೆ ಪರಿಹಾರ ನೀಡಲಾಗಿದೆ. ಪರಿಹಾರ ಪಡೆದ ಕುಟುಂಬದ ಮಕ್ಕಳು ಅಂದು ಚಿಕ್ಕವರಾಗಿದ್ದು, ಈಗ ಅವರೆಲ್ಲ ವಯಸ್ಕರರಾಗಿದ್ದಾರೆ. ಆಗ ನೀಡಿದ್ದ ಹಕ್ಕುಪತ್ರದಿಂದ ಇವರು ವಂಚಿತರಾಗಿದ್ದಾರೆ. ಅಂಥವರಿಗೂ ಸಹ ಪುನರ್ವಸತಿ ಕಲ್ಪಿಸಬೇಕೆಂಬ ವಿಷಯ ಕುರಿತು ಚರ್ಚಿಸಲಾಯಿತು. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಬಂಧಿಸಿದ ಸಚಿವರ ಗಮನಕ್ಕೆ ತರುವುದಾಗಿ ಶಿವಯೋಗಿ ಕಳಸದ ತಿಳಿಸಿದರು.

ಪ್ರವಾಹಪೀಡಿತ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಬೇಕು. ಸರ್ಕಾರ ಪ್ರತಿಯೊಂದನ್ನು ಪರಿಶೀಲಿಸುತ್ತಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ತತ್ವರಿಗತಿಯಲ್ಲಿ ಸಾಗಬೇಕು. ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸಬೇಕು.
– ಶಿವಯೋಗಿ ಕಳಸದ ಮುಖ್ಯಮಂತ್ರಿಗಳ ಕಾರ್ಯದರ್ಶಿ

Leave a Reply

Your email address will not be published. Required fields are marked *