ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಆಲಮಟ್ಟಿ (ಯುಕೆಪಿ) ಸೇರಿ ನೀರಾವರಿ ಯೋಜನೆ ಪೂರ್ಣಗೊಳಿಸಲು ಜಲ ಸಂಪನ್ಮೂಲ ಸಚಿವಾಲಯ ಆರಂಭಿಸುತ್ತೇನೆಂಬ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರದಲ್ಲಿ ಈಗಾಗಲೇ ಜಲಸಂಪನ್ಮೂಲ ಸಚಿವಾಲಯವಿದೆ. ಕಳೆದ 5 ವರ್ಷದಲ್ಲಿ ರಾಜ್ಯದ ನೀರಾವರಿಗೆ ಒಂದು ರೂ. ಹಣ ಬಿಡುಗಡೆ ಮಾಡಿಲ್ಲ. ಇದೀಗ ಕೃಷ್ಣಾ ಯೋಜನೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಶುಕ್ರವಾರ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ತಮ್ಮ ಭಾಷಣದಲ್ಲಿ ಬಾಗಲಕೋಟೆಗೆ ಏನು ಕೊಡುಗೆ ನೀಡಿದ್ದೇನೆ ಎಂದು ಹೇಳಲಿಲ್ಲ. ಐದು ವರ್ಷದಲ್ಲಿ ಎಲ್ಲರ ಮನೆಗೆ ವಿದ್ಯುತ್ ಕೊಡಲಾಗಿದೆ ಎಂದು ಹೇಳುತ್ತಾರೆ. ಇಂಥ ಟೊಳ್ಳು ಮಾತುಗಳಿಗೆ ಬೆಲೆ ಇಲ್ಲ ಎಂದು ಗುಡುಗಿದರು.

1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಜ್ಯದ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ 7-8 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಮೋದಿ ಸರ್ಕಾರ ನೀರಾವರಿಗೆ ಬಿಡಿಗಾಸು ಕೊಟ್ಟಿಲ್ಲ. ಮಹದಾಯಿ ವಿಚಾರವಾಗಿ ಗೆಜೆಟ್ ನೋಟಿಫಿಕೇಷನ್ ಮಾಡಿ ಎಂದು ಪ್ರಧಾನಿ ಮೋದಿ, ನಿತೀನ್ ಗಡ್ಕರಿಗೆ ಮನವಿ ಮಾಡಿದರೂ ಕ್ಯಾರೆ ಎನ್ನಲಿಲ್ಲ. ಕೋಯ್ನದಿಂದ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ 10 ಸಾರಿ ಮನವಿ ಮಾಡಿದ್ದೇವೆ. ನೀರು ಬಿಡಲು ಅಧಿಕಾರಿಗಳು ಸಿದ್ಧರಿದ್ದರೂ ಮಹಾರಾಷ್ಟ್ರದ ಸಿಎಂ, ನೀರಾವರಿ ಸಚಿವರು ಅಡ್ಡಗಾಲು ಹಾಕುತ್ತಿದ್ದಾರೆ. ನೀರು ಬಿಟ್ಟರೆ ಸಮ್ಮಿಶ್ರ ಸರ್ಕಾರಕ್ಕೆ ಜನ ಬೆಂಬಲ ಸಿಗುತ್ತದೆ ಎನ್ನುವ ಕಾರಣಕ್ಕೆ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಠಿಣ ಹೃದಯದ ಪ್ರಧಾನಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಧನಿಗಾಗಿ ಕಣ್ಣೀರು ಹಾಕಿದೆ
ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿದ್ದಕ್ಕೆ ಹಾಗೂ ಮೈಸೂರು ಭಾಗದ ಯೋಧ ಜೀವ ಕಳೆದುಕೊಂಡಿದ್ದ ಆತನ ಕುಟುಂಬ ನೋಡಿ ಕಣ್ಣೀರು ಬಂತು. ಪಾಕಿಸ್ತಾನದಲ್ಲಿ ಏರ್‌ಸ್ಟೈಕ್ ಮಾಡಿದ್ದಕ್ಕೆ ಕಣ್ಣೀರು ಹಾಕಿಲ್ಲ. ಪಾಕಿಸ್ತಾನದ ಕಾಡಿನಲ್ಲಿ ಬಾಂಬ್ ಹಾಕಿದ್ದಾರೆ. ಅಲ್ಲಿ ಯಾರೂ ಸತ್ತಿಲ್ಲ ಎಂದು ಪ್ರಧಾನಿಗೆ ತಿರುಗೇಟು ನೀಡಿದರು.

ಮೋದಿ ಅವರದ್ದು ಗಟ್ಟಿ ಸರ್ಕಾರ ಅಲ್ಲ. ಸುಭದ್ರ ಸರ್ಕಾರ ಎಂದು ಹೇಳುವ ಮೋದಿ ನರೇಗಾ ಯೋಜನೆಗೆ ಹಣ ಕೊಟ್ಟಿಲ್ಲ. ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರ ಸರ್ಕಾರ ವರ್ಷಕ್ಕೆ ನೀಡುವುದು 350 ಕೋಟಿ ರೂ. ಮಾತ್ರ. ರಾಜ್ಯ ಸರ್ಕಾರ ಇದಕ್ಕೆ 900 ಕೋಟಿ ರೂ. ನೀಡುತ್ತದೆ. ದುಡ್ಡು ರಾಜ್ಯ ಸರ್ಕಾರದ್ದು ೆಟೋ ಮಾತ್ರ ಮೋದಿಯದ್ದು ಎಂದು ಟೀಕಿಸಿದ ಅವರು, ರೈತರ ಸಾಲಮನ್ನಾ ಯೋಜನೆಗೆ 11 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಭೂಮಿ ಇಲ್ಲದ ಕೂಲಿ ಕಾರ್ಮಿಕರಿಗೆ ಹೊಸ ಯೋಜನೆ ತಂದು ಜಾರಿಗೊಳಿಸುವ ಆಲೋಚನೆಯಲ್ಲಿದ್ದೇನೆ ಎಂದು ಹೇಳಿದರು.

2014ರಲ್ಲಿ ಮೋದಿ ದೇಶ ಉದ್ಧಾರ ಮಾಡುತ್ತಾರೆ ಎಂದು ಮತ ಹಾಕಿದ್ದೀರಿ. ನೋಟ್‌ಬ್ಯಾನ್ ಮಾಡಿ ಬಡವರು ಬೀದಿಗೆ ಬರುವಂತೆ ಮಾಡಿದರು. ಜಿಎಸ್‌ಟಿ ಜಾರಿಯಿಂದ ಸಣ್ಣ ವ್ಯಾಪಾರಸ್ಥರ ಬದುಕು ದುಃಸ್ತರವಾಯಿತು. ಐದು ವರ್ಷದಲ್ಲಿ ದೇಶದ ಸಮಸ್ಯೆ ಎಷ್ಟು ಬಗೆಹರಿಸಿದ್ದಾರೆ ಎಂದು ಮೋದಿ ಹೇಳಲ್ಲ. ಉದ್ಯೋಗ ಕೊಡಲಿಲ್ಲ, 50 ಲಕ್ಷೃಕ್ಕೂ ಹೆಚ್ಚು ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದು ಮೋದಿ ಸಾಧನೆ, ದೇಶಕ್ಕೆ ಸಮರ್ಥ ನಾಯಕ ಬೇಕು ಎಂದು ಹೇಳ್ತಾರೆ. ನೆಹರು, ಇಂದಿರಾ, ವಾಜಪೇಯಿ ದೇಶಕ್ಕೆ ಭದ್ರತೆ, ಉತ್ತಮ ಆಡಳಿತ ಕೊಟ್ಟಲ್ಲವೇ ಎಂದು ಪ್ರಶ್ನಿಸಿದರು.

ರೈತರ ಸಾಲ ಮನ್ನಾ ಯೋಜನೆ ನನಗೆ ಸವಾಲ್ ಆಗಿದೆ. ಒಂದು ರಾತ್ರಿಯಲ್ಲಿ ಆಗುವ ಕೆಲಸ ಅಲ್ಲ. ರಾಜ್ಯ ಸರ್ಕಾರ ನಡೆಸಿ, ಅನುದಾನ ಹೊಂದಾಣಿಕೆ ಮಾಡಬೇಕಿದೆ. 45 ಸಾವಿರ ಕೋಟಿ ರೂ. ಹೊಂದಿಸಬೇಕಿದೆ. ಇದನ್ನು ಮಾಡುತ್ತೇನೆ. ರೈತರ ಬೆಳೆದ ಬೆಳೆಗಳನ್ನು ಉಗ್ರಾಣಗಳಿಗೆ ಸಾಗಿಸಲು ಸರ್ಕಾರವೇ ಹಣ ನೀಡಲಿದೆ. ಉಗ್ರಾಣದ ಬಾಡಿಗೆ ಸರ್ಕಾರ ಭರಿಸಲಿದೆ. ಬೆಲೆ ಇಲ್ಲದ ಸಂದರ್ಭದಲ್ಲಿ ಬೆಳೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ನನ್ನ ತಂಗಿ ವೀಣಾ ಕಾಶಪ್ಪನವರ ಉತ್ತಮ ಆಡಳಿತಗಾರ್ತಿ, ಬುದ್ದಿವಂತೆ. ನಿಮ್ಮ ಕ್ಷೇತ್ರದ ಸಮಸ್ಯೆಯನ್ನು ಸಂಸತ್‌ನಲ್ಲಿ ಗಮನ ಸೆಳೆಯುವ ಶಕ್ತಿ ಅವರಿಗಿದೆ. ನೀವು ಸನ್ಮಾನ ಮಾಡಿದ್ದೀರಿ. ಈ ಸನ್ಮಾನ ನನಗೆ ಬೇಕಿಲ್ಲ. ನನ್ನ ತಂಗಿ ವೀಣಾ ಗೆಲ್ಲಿಸಿಕೊಡಿ ಅದೇ ನನಗೆ ನೀಡುವ ನೀಡುವ ಸನ್ಮಾನ. ನಿಮ್ಮ ಸಮಸ್ಯೆ ನಿವಾರಿಸಲು ಮೈತ್ರಿ ಸರ್ಕಾರ ಬದ್ಧವಾಗಿದೆ. ಬಿಜೆಪಿಯವರ ಮೇ 23 ಕ್ಕೆ ಸರ್ಕಾರ ಬೀಳುತ್ತೆ. ಬಿ.ಎಸ್. ಯುಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ಹೇಳ್ತಿದ್ದಾರೆ. ಇಂತಹ ಎಷ್ಟೋ ಗಡುವು ಮುಗಿದು ಹೋಗಿವೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.
– ಕುಮಾರಸ್ವಾಮಿ ಸಿಎಂ