ಎರಡು ಗುಂಪುಗಳ ಮಧ್ಯೆ ಮಾರಾಮಾರಿ

ಬಾಗಲಕೋಟೆ: ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಹಳೇ ವೈಷಮ್ಯ ಹಾಗೂ ಹೊಲದ ದಾರಿ ವಿಷಯವಾಗಿ ಶನಿವಾರ ಸಂಜೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಎರಡೂ ಗುಂಪಿನ ಜನರು ಕಲ್ಲು, ಕೊಡಲಿ, ಬಡಗಿ ಸೇರಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದವರ ತಲೆ, ಮೈ-ಕೈಗಳಿಗೆ ಗಾಯಗಳಾಗಿವೆ. ಗಲಾಟೆ ಬಿಡಿಸಲು ಹೋಗಿದ್ದ ಬೇವೂರ ಹೊರಠಾಣೆ ಪೊಲೀಸ್ ಪೇದೆ ವೈ.ಎನ್. ಧೋನಿ ಮೇಲೆಯೂ ಹಲ್ಲೆ ನಡೆದು ಕೈಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹತ್ತು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆಗೆ ಸೇರಿಸಲಾಗಿದೆ.

ಘರ್ಷನೆಗೆ ಹೊಲದ ಮಾರ್ಗ ಒಂದು ನೆಪವಷ್ಟೆ, ಎರಡೂ ಕಡೆಯವರ ನಡುವೆ ಹಳೇ ವೈಷಮ್ಯ ಇತ್ತು. ಶನಿವಾರ ಕುಡಿದ ಮತ್ತಿನಲ್ಲಿ ಗಲಾಟೆ ಆರಂಭವಾಗಿದ್ದು, ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರಿಸ್ಥಿತಿ ತಿಳಿಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಭೈರಮಟ್ಟಿ ಗ್ರಾಮಸ್ಥರ ಆಕ್ರೋಶ
ಚೌಡಾಪುರ ಗ್ರಾಮದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ ಘಟನೆಗೆ ಸಂಬಂಧಿಸಿದಂತೆ ಪಕ್ಕದ ಭೈರಮಟ್ಟಿ ಗ್ರಾಮಸ್ಥರ ಮೇಲೆ ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಸೇರಿ ಅನೇಕರು ಬಾಗಲಕೋಟೆ ಗ್ರಾಮೀಣ ಠಾಣೆ ಎದುರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಘಟನೆಗೂ ನಮ್ಮ ಗ್ರಾಮಕ್ಕೂ ಯಾವುದೇ ಸಂಬಂಧ ಇಲ್ಲ. ಅದಾಗ್ಯೂ ಊರಿನ ಜನರನ್ನು ಹಿಡಿದು ಪೊಲೀಸರು ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪೊಲೀಸ್ ಸಿಬ್ಬಂದಿ ಹಾಗೂ ಭೈರಮಟ್ಟಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಈ ವೇಳೆ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ, ಎಸ್ಪಿ ಜತೆ ಚರ್ಚಿಸಿದರು. ಭೈರಮಟ್ಟಿ ಗ್ರಾಮಸ್ಥರ ಮೇಲೆ ಅನಗತ್ಯವಾಗಿ ಹಲ್ಲೆ ನಡೆಸಿದ ಪೊಲೀಸರ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಬಳಿಕ ಗ್ರಾಮಸ್ಥರ ಜತೆಗೆ ಚರ್ಚಿಸಿದ ಎಸ್ಪಿ ಜಗಲಾಸರ್ ಎರಡು ದಿನಗಳಲ್ಲಿ ತನಿಖೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಭೈರಮಟ್ಟಿ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟು ನಿರ್ಗಮಿಸಿದರು.

ಚೌಡಾಪುರ ಗ್ರಾಮದಲ್ಲಿ ನಡೆದ ಗುಂಪು ಘರ್ಷನೆ ಘಟನೆ ಹಿನ್ನೆಲೆಯಲ್ಲಿ ಪಕ್ಕದ ಭೈರಮಟ್ಟಿ ಗ್ರಾಮದಲ್ಲಿ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗುಂಪು ಚದುರಿಸಲು ಪಿಎಸ್‌ಐ ಲಾಠಿ ಬೀಸಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮಹಿಳೆಯರ ಮೇಲೆ ಹಲ್ಲೆಯಾಗಿಲ್ಲ. ಘಟನೆ ಬಗ್ಗೆ ಬೇರೆಡೆಯ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
– ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ