More

  ಮೌನ, ಮಾತು, ತನಿಖೆ..!

  ಅಶೋಕ ಶೆಟ್ಟರ
  ಬಾಗಲಕೋಟೆ:
  ಅವ್ಯಕ್ತವಾಗಿದ್ದ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಆಡಳಿತದ ಮೌನ ಮುರಿದಿದೆ. ಹಣ ಬಳಕೆಯಲ್ಲಿ ದುರ್ಬಳಕೆ ಆಗಿದೆ ಎನ್ನುವ ಮಾತು ಹೊರಹಾಕಿದ್ದಾರೆ. ತನಿಖೆ ಆಗಲೇಬೇಕು ಅಂತ ಪಟ್ಟು ಹಿಡಿದು ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

  ಹೌದು, ಇದು ಜಿಲ್ಲಾ ಪಂಚಾಯಿತಿಯಿಂದ ಈಗಾಗಲೇ ವರ್ಗಾವಣೆಯಾಗಿ ಹೋಗಿರುವ ಸಿಇಒ ಗಂಗೂಬಾಯಿ ಮಾನಕರ ವಿರುದ್ಧ ಜಿ.ಪಂ. ಸದಸ್ಯರ ಒಕ್ಕೂರಲ ಅಭಿಪ್ರಾಯ.

  ಆದರೆ, ಗಂಗೂಬಾಯಿ ಅವರು ಇಲ್ಲಿ ಇದ್ದಾಗ ಈ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದ ಜಿ.ಪಂ. ಆಡಳಿತ ಇದೀಗ ತನಿಖೆಗೆ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ. ಈ ಧೈರ್ಯವನ್ನು ಹಿಂದೆ ಏಕೆ ಮಾಡಲಿಲ್ಲ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

  ಮಾನಕರ ವಿರುದ್ಧದ ಆರೋಪವೇನು?
  ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸತ್ಯಮೇವ ಜಯತೆ ಕಾರ್ಯಕ್ರಮ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಆಡಳಿತ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಪ್ರಮುಖ ಆರೋಪ.

  ಜಿ.ಪಂ. ಅನುದಾನವನ್ನು ತಾ.ಪಂ. ಇಒಗೆ ಅಲ್ಲಿಂದ ಗ್ರಾ.ಪಂ. ಗೆ ಅನುದಾನ ಹಂಚಿಕೆ ಮಾಡಿದ್ದು, ಇಲ್ಲಿ ಸಿಇಒ ಅವರು ಜಾಣ್ಮೆಯಿಂದ ಕಾನೂನುಬದ್ಧವಾಗಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಜಿ.ಪಂ. ಅಧ್ಯಕ್ಷೆ ಬಾಯಕ್ಕೆ ಮೇಟಿ ಆರೋಪಿಸುತ್ತಾರೆ.

  ಸ್ವಚ್ಛ ಭಾರತ ಜಾಗೃತಿಗಾಗಿ ಗೋಡೆ ಬರಹ, ಒಡಿಎಫ್ ನಾಮಫಲಕ, ಸ್ವಚ್ಛತಾ ರಥ ಆಂದೋಲನ ಕೈಗೊಳ್ಳಲು ಗ್ರಾ.ಪಂ.ಗಳಿಗೆ ಅವಕಾಶ ನೀಡಿದ್ದರೂ ಇದೆಲ್ಲವನ್ನು ಯಾರಿಗೆ ಕೊಡಬೇಕು ಎಂದು ಅಂದು ಸಿಇಒ ಆಗಿದ್ದ ಗಂಗೂಬಾಯಿ ಮಾನಕರ ಅವರ ಮೌಖಿಕ ಆದೇಶವಾಗಿತ್ತು. ಹೀಗಾಗಿ ಜಿಲ್ಲೆಯ ಎಲ್ಲ ಜಾಗೃತಿ ಕಾರ್ಯಕ್ರಮಗಳನ್ನು ಧಾರವಾಡ ಮತ್ತು ಕಲಬುರಗಿ ಮೂಲದ ಸಂಸ್ಥೆಗಳು ನಿರ್ವಹಿಸಿದವು. ಇದರಿಂದ ಸ್ಥಳೀಯ ಕಲಾವಿದರು, ನಿರುದ್ಯೋಗಿಗಳಿಗೆ ಉದ್ಯೋಗ ವಂಚಿತ ಮಾಡಲಾಗಿದೆ. ಅಲ್ಲದೆ, ಅದೇ ಸಂಸ್ಥೆಗಳಿಗೆ ಕೊಡಿಸಿರುವ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಜಿ.ಪಂ. 12ನೇ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ಅಂತಿಮವಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆಯಲು ಒಮ್ಮತದ ನಿರ್ಧಾರವಾಗಿದ್ದು, ಇದೀಗ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.

  ಖರ್ಚು ಮಾಡಿದ್ದೆಷ್ಟು?
  ಜಿಲ್ಲೆಯ ಎಲ್ಲ 198 ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗೋಡೆ ಬರಹ, ಬ್ಯಾನರ್, ಸ್ವಚ್ಛತಾ ರಥ ಆಂದೋಲನಕ್ಕಾಗಿ ಒಟ್ಟು 99,42,192 ರೂ. ವನ್ನು ಆಯಾ ತಾಲೂಕು ಇಒಗಳಿಗೆ ಬಿಡುಗಡೆ ಮಾಡಿದ್ದು, ಅಲ್ಲಿಂದ ಗ್ರಾ.ಪಂ.ಗಳಿಗೆ ಅನುದಾನ ಹೋಗಿದೆ.
  ಬಾದಾಮಿ ತಾಲೂಕಿಗೆ 23,68,608 ರೂ., ಬಾಗಲಕೋಟೆ ತಾಲೂಕಿಗೆ 15,38,160 ರೂ., ಬೀಳಗಿ ತಾಲೂಕಿಗೆ 10,55,256 ರೂ., ಹುನಗುಂದ ತಾಲೂಕು 25,59,120 ರೂ., ಜಮಖಂಡಿ 11,53,712 ರೂ. ಹಾಗೂ ಮುಧೋಳ ತಾಲೂಕಿಗೆ 12,67,336 ರೂ.ವನ್ನು ಜಿಪಂ ಸಿಇಒ ಆಗಿದ್ದ ಗಂಗೂಬಾಯಿ ಮಾನಕರ ಬಿಡುಗಡೆ ಮಾಡಿದ್ದರು. ಅಷ್ಟು ಅನುದಾನದ ಕಾರ್ಯಕ್ರಮಗಳು ಧಾರವಾಡ ಮತ್ತು ಕಲಬುರಗಿ ಮೂಲದ ಸಂಸ್ಥೆಗಳಿಗೆ ಹೋಗಿವೆ. ಸ್ಥಳೀಯರಿಗೆ ಕೊಡಲಿಲ್ಲವೇಕೆ? ಇದೆಲ್ಲ ಪಂಚಾಯಿತಿ ನಿರ್ಧಾರ ಎನ್ನುವುದಾಗಿದ್ದರೆ ಎಲ್ಲ ಪಂಚಾಯಿತಿಗಳಿಗೂ ಆ ಸಂಸ್ಥೆಗಳೇ ಹೇಗೆ ಪರಿಚಯ? ಈ ಬಗ್ಗೆ ತನಿಖೆ ಆಗಬೇಕು. ಆ ಸಂಸ್ಥೆಗಳ ಜತೆ ಯಾರ ಒಳ ಒಪ್ಪಂದವಾಗಿತ್ತು? ಅವುಗಳು ಪಡೆದಿರುವ ಬಿಲ್ ಎಷ್ಟು? ಅದು ಹೆಚ್ಚಾಗಿದೆಯಾ? ಆಗಿದ್ದರೆ ಎಷ್ಟು? ಈ ಬಗ್ಗೆ ತನಿಖೆ ಆಗಲಿ ಎಂದು ಇದೀಗ ಜಿಪಂ ಆಡಳಿತದ ಒತ್ತಾಯವಾಗಿದೆ.

  ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಹಿಂದಿನ ಸಿಇಒ ಗಂಗೂಬಾಯಿ ಮಾನಕರ ಅವರು ತಮಗೂ ಸೇರಿ ಯಾವೊಬ್ಬ ಸದಸ್ಯರ ಗಮನಕ್ಕೂ ತರದೆ ಇಷ್ಟೊಂದು ಅನುದಾನವನ್ನು ಜಾಗೃತಿಗಾಗಿ ಖರ್ಚು ಮಾಡಿದ್ದಾರೆ. ಆದರೆ, ಧಾರವಾಡ ಮತ್ತು ಕಲಬುರಗಿ ಮೂಲದ ಸಂಸ್ಥೆಗಳು ಹೇಗೆ ಬಂದವು? ಅದೇನು ಟೆಂಡರ್ ಆಗಿಲ್ಲವಲ್ಲ. ನಮ್ಮಲ್ಲೆ ಗೋಡೆ ಬರಹ ಬರೆಯುವ ಸಾಕಷ್ಟು ಜನರಿದ್ದರೂ ಯಾಕೀ ಕ್ರಮ? ಇಲ್ಲಿ ನಮಗೆಲ್ಲ ಅನುಮಾನ ಇದೆ. ಹೀಗಾಗಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಲಾಗಿದೆ.
  ಬಾಯಕ್ಕ ಮೇಟಿ ಜಿಪಂ ಅಧ್ಯಕ್ಷರು, ಬಾಗಲಕೋಟೆ

  ಗಂಗೂಬಾಯಿ ಮಾನಕರ ಅವರ ಕಾರ್ಯವೈಖರಿ ಹಾಗೂ ಸ್ವಚ್ಛ ಭಾರತ ಜಾಗೃತಿಯಲ್ಲಿ ನಡೆದಿರಬಹುದಾದ ಅವ್ಯವಹಾರದ ಬಗ್ಗೆ ತನಿಖೆಗೆ ಬಿಜೆಪಿ ಸದಸ್ಯರು ಹಿಂದಿನಿಂದಲೂ ಒತ್ತಾಯಿಸುತ್ತ ಬಂದಿದ್ದರೂ ಆಡಳಿತ ಪಕ್ಷ ಮೌನವಾಗಿತ್ತು. ಈಗ ಅವರು ವರ್ಗಾವಣೆ ಆದ ಮೇಲೆ ತನಿಖೆ ಆಗಲಿ ಎಂದಿದ್ದಾರೆ. ಇದೆಲ್ಲ ಅಧ್ಯಕ್ಷರಿಗೆ ಗೊತ್ತಿಲ್ಲದೆ ಹೇಗಾಗುತ್ತದೆ? ಹೀಗಾಗಿ ಅನುದಾನ ದುರ್ಬಳಕೆ ಆಗಿದ್ದರೆ ಅದರಲ್ಲಿ ಸಿಇಒ ಪಾತ್ರವೇನು? ಅಧ್ಯಕ್ಷರ ಪಾತ್ರವೇನು ಎನ್ನುವುದು ತನಿಖೆ ಆಗಿ ಬೆಳಕಿಗೆ ಬರಬೇಕು.
  ಹೂವಪ್ಪ ರಾಠೋಡ ಜಿಲ್ಲಾ ಪಂಚಾಯಿತಿ ಸದಸ್ಯ (ಬಿಜೆಪಿ ಪಕ್ಷ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts