More

    ಗಂಡು, ಹೆಣ್ಣು ಎನ್ನುವ ತಾರತಮ್ಯ ಹೋಗಲಾಡಿಸಿ

    ಬಾಗಲಕೋಟೆ: ಗಂಡು, ಹೆಣ್ಣು ಎನ್ನುವ ಭೇದ-ಭಾವ ಮನಸ್ಸಿನಿಂದ ತೆಗೆದು ಹಾಕಬೇಕು. ಗಂಡು ಮಗು ಹುಟ್ಟಿದಾಗ ಎಷ್ಟೋ ಸಂಭ್ರಮ ಪಡುತ್ತೆವೋ ಅಷ್ಟೇ ಹೆಣ್ಣು ಹುಟ್ಟಿದಾಗಲೂ ಸಂತಸ ಪಡಬೇಕು. ಆ ಮೂಲಕ ಮಕ್ಕಳಲ್ಲಿನ ತಾರತಮ್ಯ ಹೋಗಲಾಡಿಸಬೇಕು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

    ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆಯಡಿ ಹೆಣ್ಣು ಮಗು ಉಳಿಸಿ, ಹೆಣ್ಣು ಮಗು ಓದಿಸಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎಂಬ ಲಿಂಗ ಭೇದ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ಮಹಾಪಾಪವಿದ್ದಂತೆ. ಕಾನೂನು ಪ್ರಕಾರ ಅಪರಾಧ. ವೈದ್ಯರು ಸಹ ಹುಟ್ಟುವ ಮಗು ಯಾವುದು ಎಂದು ತಿಳಿಸುವುದು ಅಪರಾಧ. ಇಂತಹ ಘಟನೆಗಳು ಕಂಡು ಬಂದಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಲಿಂಗಾನುಪಾತ ಪ್ರತಿ ಸಾವಿರ ಗಂಡು ಮಕ್ಕಳಿಗೆ 948 ಹೆಣ್ಣು ಮಕ್ಕಳು ಇದ್ದಾರೆ. ದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ಬಹಳಷ್ಟು ಕಡಿಮೆ ಇದೆ ಎಂದರು.

    ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾದರೆ ಮಹಾಭಾರತದಲ್ಲಿ ದ್ರೌಪದಿಗೆ 5 ಜನ ಗಂಡಂದಿರು ಇರುವ ಹಾಗೆ ಪರಿಸ್ಥಿತಿ ಒದಗಿಬರುತ್ತದೆ. ಈ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕಾದರೆ ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಸಂರಕ್ಷಣೆ, ಪೋಷಣೆ ಹಾಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ತಿಳಿಸಿದರು.

    ಪ್ರತಿಜ್ಞಾವಿಧಿ ಕಾರ್ಯಕ್ರಮ ಪೂರ್ವದಲ್ಲಿ ಶಾಲೆ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ. ಗುಡೂರ ಇತರರು ಉಪಸ್ಥಿತರಿದ್ದರು.

    ಸಮಾಜದಲ್ಲಿ ಎಲ್ಲ ಬಗೆಯ ಲಿಂಗ ತಾರತಮ್ಯಗಳನ್ನು ಕೊನೆಗೊಳಿಸಬೇಕು. ಹೆಣ್ಣು ಶಿಶು ಹುಟ್ಟಿಗೆ ಮತ್ತು ಬದುಕಿಗೆ ಮಾರಕವಾಗಿರುವ ಎಲ್ಲ ಅಂಶಗಳನ್ನು ಹೊಡೆದೊಡಿಸಬೇಕು. ಹೆಣ್ಣು ಮಗುವಿನ ಶಿಕ್ಷಣ, ಪ್ರೀತಿ, ವಾತ್ಸಲ್ಯ, ಸುರಕ್ಷತೆ ಹಾಗೂ ಪೋಷಣೆ ದೊರೆಯುವಂತೆ ನೋಡಿಕೊಳ್ಳಬೇಕು. ಆ ಮೂಲಕ ದೇಶದ ಶಕ್ತಿಶಾಲಿ ಹಾಗೂ ಸಮಾನ ಅಧಿಕಾರಗಳನ್ನು ಹೊಂದಿದ ಪ್ರಜೆಯಾಗುವಂತೆ ರೂಪುಗೊಳಿಸಬೇಕು. ಇದಕ್ಕಾಗಿ ಒಂದು ವಾರ ಜಿಲ್ಲಾದ್ಯಂತ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    – ಗಂಗೂಬಾಯಿ ಮಾನಕರ ಜಿಪಂ ಸಿಇಒ

    ಬೃಹತ್ ಜಾಗೃತಿ ಜಾಥಾ
    ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ ಹೆಣ್ಣು ಮಗು ರಕ್ಷಿಸಿ, ಹೆಣ್ಣು ಮಗು ಓದಿಸಿ ಎಂಬ ಬೃಹತ್ ಜಾಗೃತಿ ಜಾಥಾಕ್ಕೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಚಾಲನೆ ನೀಡಿದರು. ಹಳೇ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಅಂಬೇಡ್ಕರ್ ಪುತ್ಥಳಿ ಮಾರ್ಗವಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಮುಕ್ತಾಯವಾಯಿತು. ವಿವಿಧ ಶಾಲೆಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts