More

    ಜ.12 ರಂದು ಕೋಟೆನಗರಿಯಲ್ಲಿ ಬೃಹತ್ ರ‌್ಯಾಲಿ

    ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ(ಪೌರತ್ವ ಕಾಯ್ದೆ) ಬೆಂಬಲಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಬಾಗಲಕೋಟೆ ನಗರದಲ್ಲಿ ಜ.12 ರಂದು ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ಅಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಬಿಜೆಪಿ ಕಚೇರಿ(ಶಿವಾನಂದ ಜೀನ್)ನಿಂದ ರ‌್ಯಾಲಿ ಆರಂಭವಾಗಿ ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ಅಡತ್ ಬಜಾರ್, ಟೆಂಗಿನಮಠ, ಕಾಲೇಜು ರಸ್ತೆ ಮೂಲಕ ಚರಂತಿಮಠಕ್ಕೆ ತಲುಪಿ ಬೃಹತ್ ಸಮಾವೇಶವಾಗಿ ಮಾರ್ಪಡಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಡಿಸಿಎಂ ಗೋವಿಂದ ಕಾರಜೋಳ, ಸಚಿವ ಸಿ.ಟಿ.ರವಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಸಿದ್ದು ಸವದಿ, ದೊಡ್ಡನಕಗೌಡರ ಪಾಟೀಲ, ಮುರಗೇಶ ನಿರಾಣಿ, ವಿ.ಪ ಸದಸ್ಯ ಹನುಮಂತ ನಿರಾಣಿ ಸೇರಿದಂತೆ ಮಾಜಿ ಶಾಸಕರು, ಜಿಪಂ ಸದಸ್ಯರು, ತಾಪಂ ಸದಸ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

    ಈಗಾಗಲೇ ಪೌರತ್ವ ಕಾಯ್ದೆ ಬೆಂಬಲಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. ಜಿಲ್ಲೆಯಾದ್ಯಂತ ಬಿಜೆಪಿ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿಯೊಂದು ಬೂತನಲ್ಲಿ ಜಾಗೃತಿ ಕಾರ್ಯಕ್ರಮಗಳು ಜರಗುತ್ತಿವೆ ಎಂದು ಹೇಳಿದರು.

    ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಪೌರತ್ವ ಕಾಯ್ದೆ ಬಗ್ಗೆ ವಿರೋಧ ಪಕ್ಷದ ನಾಯಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ 130 ಜನರಿಗೆ ಈ ಕಾಯ್ದೆಯಿಂದ ಯಾವುದೇ ಕೆಟ್ಟ ಪರಿಣಾಮ ಬೀರುವದಿಲ್ಲ. ಬಾಂಗ್ಲಾ, ಪಾಕಿಸ್ತಾನ, ಅಫಘಾನಿಸ್ತಾನ ದೇಶಗಳಿಂದ ವಲಸೆ ಬಂದಿರುವ ಹಿಂದುಗಳು, ಜೈನ್, ಸಿಖ್, ಪಾರ್ಸಿ ಜನಾಂಗದವರಿಗೆ ಕಾಯ್ದೆ ಮೂಲಕ ಪೌರತ್ವ ನೀಡಲಾಗುತ್ತಿದೆ. 1955 ರಲ್ಲಿ ನೆಹರೂ ಅವರು ಜಾರಿಗೆ ತಂದಿದ್ದ ಪೌರತ್ವ ಕಾಯ್ದೆಯಲ್ಲಿ ಕೆಲ ಸುಧಾರಣೆ ಮಾಡಲಾಗಿದೆ ಹೊರತು ಭಯ, ಭೀತಿ ಸೃಸ್ಟಿಸುವ ಯಾವುದೇ ಅಂಶಗಳು ಇಲ್ಲ. ಆದರೇ ವಿಪಕ್ಷಗಳು ರಾಕ್ಷಸ ರೀತಿಯಲ್ಲಿ ವರ್ತಿಸುತ್ತಿವೆ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಮ ಮಂದಿರದಂತ ಜಂಟಿಲ ಸಮಸ್ಯೆಯನ್ನು ಶಾಂತಿಯುವಾಗಿ ಬಗೆ ಹರಿಸಲಾಗಿದೆ. 370 ವಿಧಿ ರದ್ದು ಪಡಿಸಿ ಜಮ್ಮು-ಕಾಶ್ಮೀರದಲ್ಲಿ ಉತ್ತಮ ವಾತಾವರಣ ನಿರ್ಮಿಸಲಾಗಿದೆ. ತಲಾಖ್ ವಿಷಯಗಳು ಕೂಡಾ ಸಮಾಧಾನದಿಂದ ಅನುಷ್ಠಾನಗೊಳಿಸಲಾಗಿದೆ. ಇದನೆಲ್ಲ ನೋಡಿ ಭಯ ಬಿದ್ದಿರುವ ವಿಪಕ್ಷಗಳು ಇದೀಗ ಪೌರತ್ವ ಕಾಯ್ದೆ ಬಗ್ಗೆ ಸುಳ್ಳಿನ ವದಂತಿ ಹಬ್ಬಿಸಿ ತಲ್ಲಣ ಸೃಷ್ಟಿಸುತ್ತಿವೆ ಎಂದು ಲೇವಡಿ ಮಾಡಿದ ಮಾಜಿ ಶಾಸಕ ಸಂಜಯ ಪಾಟೀಲ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಶಾಸಕ ರಮೇಶ ಜಾರಕಿಹೊಳಿ ನಡುವಿನ ಸಮರಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವದಿಲ್ಲ. ಚುನಾವಣೆ ಬಂದಾಗ ನೋಡನ. ಇದೀಗ ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾತ್ರ ಕರ್ತವ್ಯವಾಗಿದೆ ಎಂದು ತಿಳಿಸಿದರು.

    ವಿಧಾನ ಪರಿಷತ್ತ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ರಾಜು ರೇವಣಕರ, ಜ್ಯೋತಿ ಭಜಂತ್ರಿ, ಡಾ.ಬಾಬು ರಾಜೇಂದ್ರ ನಾಯಕ, ಬಸವರಾಜ ಅವರಾದಿ, ಮಲ್ಲೇಶಪ್ಪ ಜಿಗಜಿನ್ನಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts