ದೋಸ್ತಿ ಪಕ್ಷಗಳ ಶಕ್ತಿ ಪ್ರದರ್ಶನ

ಬಾಗಲಕೋಟೆ: ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಾಗಲಕೋಟೆ ಕ್ಷೇತ್ರ ಮರಳಿ ತನ್ನ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಸಿದ್ದು, ಸೋಮವಾರ ಮೈತ್ರಿ ಪಕ್ಷಗಳು ಶಕ್ತಿ ಪ್ರದರ್ಶನ ನಡೆಸಿದವು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಬೃಹತ್ ರ‌್ಯಾಲಿ ನಡೆಸಿ, ಬಳಿಕ ಸಕ್ರಿ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಚಿವ ಆರ್.ಬಿ.ತಿಮ್ಮಾಪುರ, ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಆನಂದ ನ್ಯಾಮಗೌಡ, ಜೆಡಿಎಸ್ ಮುಖಂಡರಾದ ಬಸವರಾಜ ಹೊರಟ್ಟಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ, ಘನಶಾಮ ಭಾಂಡಗೆ, ರಂಗಭೂಮಿ ಕಲಾವಿದೆ ಪಂಕಜ ಸೇರಿ ಜಿಲ್ಲೆಯ ಮುಖಂಡರು ಹಾಗೂ ಸಹಸ್ರಾರು ಕಾರ್ಯಕರ್ತರು ಭಾಗವಹಿಸುವ ಮೂಲಕ ಲೋಕಸಮರದಲ್ಲಿ ಕೋಟೆ ನಾಡು ಗೆಲ್ಲಲು ರಣಕಹಳೆ ಮೊಳಗಿಸಿದರು.

ಎಂಟು ವಿಧಾನಸಭಾ ಕ್ಷೇತ್ರಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು, ಸಂಜೆ ನಡೆದ ಬೃಹತ್ ಸಮಾವೇಶದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಬಾವುಟಗಳು ರಾರಾಜಿಸಿದವು.

ಮೈಸೂರು ಕ್ಷೇತ್ರದಷ್ಟೇ ಬಾಗಲಕೋಟೆ ಗೆಲುವು ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯಾಗಿದೆ. ಈ ಕ್ಷೇತ್ರದ ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ ಸಮಾವೇಶದಲ್ಲಿ ಅದನ್ನು ಒತ್ತಿ ಒತ್ತಿ ಹೇಳಿದರು. ನಾನು ಬೇರೆಯವನಲ್ಲ, ಬಾಗಲಕೋಟೆ ಜಿಲ್ಲೆಯವ, ಬಾದಾಮಿ ಶಾಸಕ. ಹೀಗಾಗಿ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಮಹಿಳೆಗೆ ಟಿಕೆಟ್ ಸಿಕ್ಕಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಬಾಗಲಕೋಟೆ ಒಂದರಲ್ಲಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಇದ್ದಾರೆ. ಕ್ಷೇತ್ರದ ಎಲ್ಲ ಮಹಿಳೆಯರು ವೀಣಾಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ತಮಗೆ ಶಾಸಕಿಯಾಗುವುದಕ್ಕಿಂತ ಸಂಸತ್ ಸದಸ್ಯೆ ಆಗಬೇಕು ಎನ್ನುವ ಕನಸು ಇತ್ತು. ಆದರೆ, ಕಳೆದ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಸೋಲಬೇಕಾಯಿತು. ನನಗೆ ಆಗಿರುವ ಸೋಲಿನ ಸೇಡನ್ನು ನನ್ನ ತಂಗಿ ವೀಣಾ ಕಾಶಪ್ಪನವರನ್ನು ಗೆಲ್ಲಿಸುವ ಮೂಲಕ ತೀರಿಸಬೇಕು ಎಂದು ಮಹಿಳೆಯರಲ್ಲಿ ಕೈಮುಗಿದು ಕೋರಿದರು.

ಗದ್ದಿಗೌಡರ ವಿರುದ್ಧ ವಾಗ್ದಾಳಿ
ಸಿದ್ದರಾಮಯ್ಯ ಸೇರಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೈ-ಜೆಡಿಎಸ್ ಮುಖಂಡರು ತಮ್ಮ ಭಾಷಣದಲ್ಲಿ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

15 ವರ್ಷ ಸಂಸದರಾಗಿದ್ದರೂ ಕ್ಷೇತ್ರಕ್ಕೆ ಯಾವುದೇ ಮಹತ್ತರ ಕೊಡುಗೆ ಕೊಡಲಿಲ್ಲ. ಇಲ್ಲಿನ ನಿರುದ್ಯೋಗಿಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಯಾವೊಂದು ಯೋಜನೆ ತರಲಿಲ್ಲ. ಮೂರು ಸಲ ಗೆದ್ದರೂ ಒಮ್ಮೆ ವಾಜಪೇಯಿ ಅಲೆ, ಮತ್ತೊಮ್ಮೆ ಯಡಿಯೂರಪ್ಪ ಗಾಳಿ, ಮಗದೊಮ್ಮೆ ಮೋದಿ ಅಲೆಯಲ್ಲಿ ಗೆದ್ದು ಬಂದಿದ್ದಾರೆ. ಈಗಲೂ ಮೋದಿ ಮುಖ ನೋಡಿ ವೋಟು ಕೊಡಿ ಅಂತಿದ್ದಾರೆ. ನಾನು ಕ್ಷೇತ್ರಕ್ಕೆ ಇಂತದ್ದನ್ನು ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಅವರ ಬಳಿ ಯಾವುದೇ ಸಾಧನೆಗಳು ಇಲ್ಲ. ಹೀಗಾಗಿ ಈ ಸಲ ಮೋದಿ ಅಲೆ ಕೈ ಹಿಡಿಯಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬಿರುಗಾಳಿ ಎಬ್ಬಿದೆ. ಈ ಗಾಳಿಯಲ್ಲಿ ಗದ್ದಿಗೌಡರು ತೂರಿ ಹೋಗುತ್ತಾರೆ. ಬಾಗಲಕೋಟೆ ಕ್ಷೇತ್ರದಿಂದ ಮಹಿಳೆಯನ್ನು ಸಂಸತ್‌ಗೆ ಕಳುಹಿಸಿಕೊಡಿ ಎಂದು ಸಿದ್ದರಾಮಯ್ಯ, ಎಸ್.ಆರ್.ಪಾಟೀಲ, ಸಿ.ಎಂ.ಇಬ್ರಾಹಿಂ, ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ಎಸ್.ಜಿ. ನಂಜಯ್ಯನಮಠ, ಅಜಯಕುಮಾರ ಸರನಾಯಕ, ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪ ಅಮನಾಥ, ಬಸವಪ್ರಭು ಸರನಾಗೌಡ, ಮುಖಂಡರಾದ ಶ್ರೀಶೈಲ ದಳವಾಯಿ, ಶಿವಾನಂದ ಉದುಪುಡಿ, ಎಂ.ಬಿ.ಸೌದಾಗರ ಇತರರು ಇದ್ದರು.

ಪ್ರದಾನಿ ಮೋದಿ ಟಾರ್ಗೆಟ್
ಸಮಾವೇಶದಲ್ಲಿ ಅಭ್ಯರ್ಥಿ ವೀಣಾ ಕಾಶಪ್ಪನವರ ಸೇರಿ ಎಲ್ಲ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಟಾರ್ಗೆಟ್ ಮಾಡಿ ಭಾಷಣ ಮಾಡಿದರು. ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ. ಈ ಐದು ವರ್ಷ ತಾವು ಏನು ಮಾಡಿದ್ದಾರೆ ಎಂದು ಜನರಿಗೆ ಉತ್ತರಿಸಲಿ. ಬರೀ ಭಾಷಣ ಮಾಡುವ ಮೋದಿ, ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ. ಆ ಬಗ್ಗೆ ಬಾಯಿ ಬಿಡದೆ ಬರೀ ಭಾವನಾತ್ಮಕ ವಿಷಯಗಳನ್ನು ಕೆದಕಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 12 ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ. ಎರಡು ಸಲ ಪಾಕ್ ವಿರುದ್ಧ ಯುದ್ಧ ಮಾಡಿ ಗೆದ್ದಿದ್ದೇವೆ. ಆದರೆ, ನಾವು ಅದನ್ನು ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡಲಿಲ್ಲ. ಆದರೆ, ಮೋದಿ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.

ಮೋದಿ ಅವರು ಚೌಕಿದಾರ್ ಅಂತಾರೆ. ಅವರು ಶ್ರೀಮಂತರಿಗೆ ಚೌಕಿದಾರ್ ಆಗಿದ್ದಾರೆ ಹೊರತು ಬಡವರು, ರೈತರಿಗೆ ಆಗಲಿಲ್ಲ. ಈ ದೇಶಕ್ಕೆ ಸ್ವಾತಂತ್ರೃ ಕೊಡಿಸಿದ ಪಕ್ಷ ಕಾಂಗ್ರೆಸ್. ಆಗ ಬಿಜೆಪಿಯೂ ಇರಲಿಲ್ಲ, ಮೋದಿಯೂ ಇರಲಿಲ್ಲ. ಈ ದೇಶಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ, ಮಹಾತ್ಮ ಗಾಂಧಿಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಲಕ್ಷಾಂತರ ದೇಶಭಕ್ತರು ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿ ಯಾರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಮೋದಿಯವರು ಹೇಳಲಿ ನೋಡೋಣ. ನಮಗೆ ಇವರು ದೇಶಭಕ್ತಿ ಬಗ್ಗೆ ಹೇಳುತ್ತಾರಾ ಎಂದು ಚುಚ್ಚಿದರು.

ಪ್ರಧಾನಿ ನರೇಂದ್ರ ಮೋದಿ ಅವರೇ 56 ಇಂಚಿನ ಎದೆ ಇದ್ರೆ ಸಾಲದು. ಬಡವರು, ರೈತರು, ಮಹಿಳೆಯರ ಬಗ್ಗೆ ಚಿಂತನೆ ಮಾಡುವ ಹೃದಯ ಬೇಕು. ವಿಧಾನಸಭೆ ಚುನಾವಣೆಯಲ್ಲಿ ನಾವು ಸೋತಿರಬಹುದು. ಜನರಿಗೆ ನೀಡಿದ್ದ 165 ಭರವಸೆ ಈಡೇರಿಸಿದ್ದೇವೆ. ಪ್ರಧಾನಿ ಮೋದಿ ಆಡಳಿತ ವಿಫಲವಾಗಿದೆ. ಹೀಗಾಗಿ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳನ್ನು ಬಿಜೆಪಿ ಮುಂದಿಡುತ್ತಿದೆ. ಅದಾನಿ, ಅಂಬಾನಿ ಅಂತವರ ಚೌಕಿದಾರ್ ಆದರೆ ಉಪಯೋಗವಿಲ್ಲ. ಬಡವರ, ರೈತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಚೌಕಿದಾರ್ ಆಗಬೇಕು. ಮೋದಿ ನೋಡಿ ವೋಟ್ ಹಾಕಿ ಎನ್ನುವ ಬಿಜೆಪಿಗರು ಬಾಗಲಕೋಟೆ ಜಿಲ್ಲೆಗೆ ಬಂದು ಮೋದಿ ಕೆಲಸ ಮಾಡ್ತಾರಾ. ರಾಜ್ಯದ 28 ಕ್ಷೇತ್ರದಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ, ಅವರು ಹೇಗೆ ಹಿಂದುಳಿದ ನಾಯಕ ಆಗುತ್ತಾರೆ.
– ಸಿದ್ದರಾಮಯ್ಯ ಮಾಜಿ ಸಿಎಂ, ಬಾದಾಮಿ ಶಾಸಕ

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡ್ತಾರೆ ಎಂದು ವೋಟ್ ಕೊಟ್ಟರೆ ಕೆಲಸ ಮಾಡುವವರು ಯಾರು ? ಮಂತ್ರಕ್ಕೆ ಮಾವಿನ ಕಾಯಿ ಉದುರಲ್ಲ. ಮಾತಿನಿಂದ ದೇಶದ ಅಭಿವೃದ್ಧಿ ಆಗಲ್ಲ. ನರೇಂದ್ರ ಮೋದಿ ಅಪ್ಪನಂಗೆ ನಾವೂ ಭಾಷಣ ಮಾಡುತ್ತೇವೆ. ಅಲೆಯಲ್ಲಿ ಗೆದ್ದು ಬಂದಿರುವ ಸಂಸದ ಗದ್ದಿಗೌಡರ ಜಿಲ್ಲೆಗೆ ಯಾವುದೇ ಕೊಡುಗೆ ಕೊಟ್ಟಿಲ್ಲ. ವೀಣಾಗೆ ಅವಕಾಶಕೊಡಿ.
– ಲಕ್ಷ್ಮೀ ಹೆಬ್ಬಾಳ್ಕರ