ಗೌಡರ ಎದುರು ಯಾರು ಕಾಂಗ್ರೆಸ್ ಕಲಿ ?

ಅಶೋಕ ಶೆಟ್ಟರ

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಅಖಾಡ ಪ್ರವೇಶ ಫಿಕ್ಸ್ ಆಗಿದೆ. ಇನ್ನೇನಿದ್ದರೂ ಅವರ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದಿಂದ ಯಾರು ಎನ್ನುವುದು ಬಹಿರಂಗವಾಗಬೇಕಿದೆ. ಮೈತ್ರಿಯಿಂದಾಗಿ ಜೆಡಿಎಸ್ ಸ್ಪರ್ಧೆಯಿಂದ ದೂರವಾಗಿದೆ.

ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಯಾವೊಬ್ಬ ಹಾಲಿ, ಮಾಜಿ ಶಾಸಕರು, ಸಚಿವರು, ಅನುಭವಿ ರಾಜಕಾರಣಿಗಳು ಕಣದಲ್ಲಿ ಕಾಣಿಸಿಕೊಳ್ಳಲು ಆಸಕ್ತಿ ಹೊಂದಿದಂತೆ ಕಾಣುತ್ತಿಲ್ಲ. ಹೀಗಾಗಿ ಹೊಸಮುಖಕ್ಕೆ ಅವಕಾಶ ನೀಡಲು ಪಕ್ಷ ಮುಂದಾಗಿದೆ. ಆ ಹೊಸಬರು ಯಾರು ಎನ್ನುವ ಪ್ರಶ್ನೆ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.

ಲಭ್ಯ ಮಾಹಿತಿಯಂತೆ ಹನುಮಂತನ ಬಾಲದಂತೆ ಬೆಳೆದಿದ್ದ ಆಕಾಂಕ್ಷಿಗಳ ಪಟ್ಟಿಯನ್ನು ತುಂಡರಿಸಿರುವ ಜಿಲ್ಲಾ ಮುಖಂಡರು, ಇದೀಗ ನಾಲ್ವರ ಹೆಸರನ್ನು ಫೈನಲ್ ಮಾಡಿದ್ದಾರಂತೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ನಿಂಗನೂರ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖೋತ ಹಾಗೂ ಶಿವಾನಂದ ನಿಂಗನೂರ ಸ್ಪರ್ಧೆಯಲ್ಲಿ ಉಳಿದಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

ಜಿಲ್ಲೆಯಿಂದ ಸಂಭಾವ್ಯ ಅಭ್ಯರ್ಥಿಗಳ ಪೈಕಿ ಯಾರಾದರೂ ಒಬ್ಬರು ಅಭ್ಯರ್ಥಿಯಾಗಬಹುದು. ಇಲ್ಲವೆ, ಇವರನ್ನು ಹೊರತುಪಡಿಸಿ ಪಕ್ಷದ ವರಿಷ್ಠರು ಬೇರೆಯವರನ್ನು ಘೋಷಣೆ ಮಾಡಿದರೂ ಅದಕ್ಕೆ ಎಲ್ಲರೂ ಸಮ್ಮತಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸಭೆಯಲ್ಲಿ ನಿರ್ಧಾರ ಮಾಡಿದಂತೆ ಜಿಲ್ಲೆಯ ನಾಲ್ವರು ಹಿರಿಯ ಮುಖಂಡರು ಸೇರಿ ನಾಲ್ವರ ಹೆಸರನ್ನು ಅಂತಿಮಗೊಳಿಸಿ, ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಇದೀಗ ಸಿದ್ದರಾಮಯ್ಯ ಜತೆ ಚರ್ಚಿಸಿ, ಒಬ್ಬರ ಹೆಸರನ್ನು ಅಂತಿಮಗೊಳಿಸಿ ಎರಡು ದಿನಗಳಲ್ಲಿ ಹೈಕಮಾಂಡ್‌ಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಲಿಂಗಾಯತ ಅಭ್ಯರ್ಥಿಗೆ ಟಿಕೆಟ್
ಪಕ್ಷದ ಆಂತರಿಕ ವಲಯದಲ್ಲಿ ಹಲವು ದಿನಗಳಿಂದ ಲೋಕಸಮರದಲ್ಲಿ ಬಿಜೆಪಿ ಎದುರಿಸಲು ಲಿಂಗಾಯತರಿಗೆ ಟಿಕೆಟ್ ಕೊಡಬೇಕೆನ್ನುವ ಕೂಗು ಬಲವಾಗಿದೆ. ಮತ್ತೊಂದು ಕಡೆಗೆ ಕುರುಬ ಸಮಾಜದವರು ಸಹ ತಮಗೆ ಆದ್ಯತೆ ನೀಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಆದರೆ, ಇತ್ತೀಚೆಗೆ ಜಿಲ್ಲೆಯಲ್ಲಿ ಕುರುಬ ಸಮಾಜದವರಿಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ನೀಡಿದ್ದರಿಂದ ಲೋಕಸಭೆ ಟಿಕೆಟ್ ಸಹ ಆ ಸಮುದಾಯಕ್ಕೆ ಕೊಡುವ ಸಾಧ್ಯತೆ ಇಲ್ಲ. ಹೀಗಾಗಿ ಲಿಂಗಾಯತ ಸಮುದಾಯದ ಹೆಚ್ಚಿನ ಜನಸಂಖ್ಯೆ ಇರುವ ಜಾತಿವರಿಗೆ ಅವಕಾಶ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ ಪೂರಕ ಎಂಬಂತೆ ಸಂಭಾವ್ಯರು ಎನ್ನಲಾದ ನಾಲ್ವರೂ ಸಹ ಲಿಂಗಾಯತರು ಎಂಬುದು ಗಮನಾರ್ಹ.

ಸೋಲಿನ ಸರಪಳಿ ಕಳಚುತ್ತಾ ?
ಹಿಂದೊಮ್ಮೆ ಬಾಗಲಕೋಟೆ ಕ್ಷೇತ್ರ ಎಂದರೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿತ್ತು. ಆ ಅಭೇದ್ಯ ಕೋಟೆಗೆ ಕನ್ನಹಾಕಿ ಗಟ್ಟಿಬೇರು ಬಿಟ್ಟಿದ್ದು ಬಿಜೆಪಿಯ ಪಿ.ಸಿ. ಗದ್ದಿಗೌಡರ. ಸತತ ಮೂರು ಸಲ ಗೆದ್ದಿದ್ದಾರೆ. ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಕಾಂಗ್ರೆಸ್ ಪಕ್ಷ ಇಷ್ಟೊಂದು ದೀರ್ಘ ಅವಧಿ ಅಧಿಕಾರದಿಂದ ವಂಚಿತವಾಗಿರಲಿಲ್ಲ. ಹೀಗಾಗಿ ಸಲ ಗದ್ದಿಗೌಡರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪಕ್ಷ ತಂತ್ರ ಹೆಣೆಯುತ್ತಿದೆ. ಸಿದ್ದರಾಮಯ್ಯ ಅವರು ಜಿಲ್ಲೆಯ ಶಾಸಕರಾಗಿದ್ದರಿಂದ ಅವರಿಗೂ ಇದು ಪ್ರತಿಷ್ಠೆ ಆಗಿದೆ. ಇದರಿಂದ ಪ್ರಬಲ ಸಮುದಾಯದಕ್ಕೆ ಟಿಕೆಟ್ ನೀಡಿ, ಆ ಮತಗಳನ್ನು ಸೆಳೆಯುವುದು ಹಾಗೂ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಕ್ರೋಡೀಕರಿಸಿ, ಸೋಲಿನ ಸರಪಳಿ ಕಳಚುವ ಪ್ರಯತ್ನದಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬೆನ್ನಿಗೆ ಇರುವುದು, ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಶಾಸಕರನ್ನು ಹೊಂದಿರುವುದು, ಜತೆಗೆ ವೈಯಕ್ತಿಕ ವರ್ಚಸ್ಸು ಹೊಂದಿರುವ ಪಿ.ಸಿ.ಗದ್ದಿಗೌಡರನ್ನು ಮಣಿಸುವುದು ಸುಲಭದ ತುತ್ತಂತೂ ಅಲ್ಲ. ಹೀಗಾಗಿ ಸಲ ಬಿಜೆಪಿ, ಕಾಂಗ್ರೆಸ್ ನಡುವಿನ ಮೆಗಾಫೈಟ್ ತೀವ್ರಗೊಳ್ಳುವುದಂತೂ ಸತ್ಯ.

ಕ್ಷೇತ್ರದಲ್ಲಿ ಮೂರು ಸಲ ಗೆದ್ದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಪ್ರವಾಸೋದ್ಯಮ, ರೈಲ್ವೆ, ರಸ್ತೆ ಅಭಿವೃದ್ಧಿ ಸೇರಿ ಸಾಕಷ್ಟು ಅನುದಾನ ಬಂದಿದೆ. ಕೆಲ ಯೋಜನೆಗಳಲ್ಲಿ ನಮ್ಮ ವೇಗಕ್ಕೆ ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅಮೃತ, ಹೃದಯ, ಕುಡಚಿ-ಬಾಗಲಕೋಟೆ ರೈಲ್ವೆ ಯೋಜನೆ ನಿಧಾನವಾಗಿ ಸಾಗಿವೆ. ಈ ಬಾರಿ ದೇಶದ ಜನ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಿರ್ಧಾರಿಸಿದ್ದಾರೆ. ಹೀಗಾಗಿ ಬಿಜೆಪಿ ನಾಲ್ಕನೇ ಸಲವೂ ಗೆಲ್ಲವುದರಲ್ಲಿ ಯಾವುದೇ ಅನುಮಾನ ಇಲ್ಲ.
– ಪಿ.ಸಿ.ಗದ್ದಿಗೌಡರ ಸಂಸದರು, ಬಾಗಲಕೋಟೆ

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಲು ಎಲ್ಲ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮೂರು ಸಲ ಸೋತಿದ್ದರೂ ಈ ಬಾರಿ ಮಾತ್ರ ಸೋಲಿನ ಸಪರಳಿ ಕಳಚಿ ಹೊರ ಬಂದೇ ಬರುತ್ತದೆ. ಪಕ್ಷದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ.
-ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕರು, ಹುನಗುಂದ