ಗದ್ದಿಗೌಡರ ನಾಗಾಲೋಟ ನಿಶ್ಚಿತ

ಬಾಗಲಕೋಟೆ: ಲೋಕಸಭೆ ಚುನಾವಣೆ ಅಖಾಡದಲ್ಲಿ ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ದೇಶದ ಮತದಾರ ಪ್ರಭುಗಳು ಬಯಸಿದ್ದಾರೆ. ಬಾಗಲಕೋಟೆಯಲ್ಲಿ ಸಿಕ್ಕಿರುವ ಅಪಾರ ಬೆಂಬಲವೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ರಾಹುಲ್ ಗಾಂಧಿ, ರಾಜ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಆಟ ನಡೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಾಮಾಣಿಕ ವ್ಯಕ್ತಿ ಸಂಸದ ಪಿ.ಸಿ. ಗದ್ದಿಗೌಡರ ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದರು.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡುತ್ತಿಲ್ಲ. 48 ಸಾವಿರ ಕೋಟಿ ರೂ. ರೈತರ ಸಾಲ ಮಾಡಿದ್ದೇವೆ ಎಂದು ಹೇಳುವ ಸಿಎಂ ಕುಮಾರಸ್ವಾಮಿ ಈವರೆಗೆ ಕೇವಲ 4 ಸಾವಿರ ಕೋಟಿ ರೂ. ಮಾತ್ರ ಸಾಲಮನ್ನಾ ಮಾಡಿದ್ದಾರೆ. ಸುಳ್ಳು ಹೇಳುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಬೇಕು. ಸಂಸದ ಗದ್ದಿಗೌಡರ ಅವರಿಗೆ ನಾಲ್ಕನೇ ಬಾರಿಗೆ ಅವಕಾಶ ನೀಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ರೈತರು, ಕಾರ್ಮಿಕರಿಗೆ ಬಲ ತುಂಬಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಸಾಧ್ಯ. ಪ್ರಪಂಚ ಭಾರತದತ್ತ ತಿರುಗಿ ನೋಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಅವಶ್ಯವಿದೆ. ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬ ಮತದಾರನಿಗೆ ತಲುಪಿಸಬೇಕು. 5 ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿರುವ ಪ್ರಗತಿ ಬಗ್ಗೆ ಜನಸಾಮಾನ್ಯರಿಗೆ ಅರ್ಥ ಮಾಡಿಸಬೇಕು ಎಂದು ತಿಳಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಮತಕ್ಷೇತ್ರದ ಜನರ ಆಶೀರ್ವಾದದಿಂದ ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ, ಯೋಜನೆಗಳನ್ನು ತಂದು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮತ್ತೆ ಜಿಲ್ಲೆಯ ಮತದಾರರು ಆಶೀರ್ವಾದ ಮಾಡಬೇಕು. ದೇಶದ ಹಿತ, ಅಭಿವೃದ್ಧಿ ಮಾನದಂಡವಾಗಿಟ್ಟುಕೊಂಡು ಕೆಲಸ ಮಾಡಿದ ಬಿಜೆಪಿಯನ್ನು ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕರಾದ ಗೋವಿಂದ ಕಾರಜೋಳ, ವೀರಣ್ಣ ಚರಂತಿಮಠ, ಸಿದ್ದು ಸವದಿ, ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ, ದೊಡ್ಡನಗೌಡ ಪಾಟೀಲ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ, ಪ್ರಕಾಶ ತಪಶೆಟ್ಟಿ, ಮುಖಂಡರಾದ ಶ್ರೀಕಾಂತ ಕುಲಕರ್ಣಿ, ಪಿ.ಎಚ್. ಪೂಜಾರ, ನಾರಾಯಣಸಾ ಭಾಂಡಗೆ, ಜಗದೀಶ ಗುಡಗುಂಟಿ, ಜಿ.ಎಸ್.ನ್ಯಾಮಗೌಡ, ಜಿ.ಎನ್. ಪಾಟೀಲ ಇತರರು ಇದ್ದರು.