ಬಿಜೆಪಿ ವಿರುದ್ಧ ಜಂಟಿ ಹೋರಾಟ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರ ಪರವಾಗಿ ಮತಯಾಚನೆ ಮಾಡಲಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಡೆದ ಎಲ್ಲ ಕಹಿ ಘಟನೆಗಳನ್ನು ಮರೆತು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಘೋಷಣೆ ಮಾಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಟ್ಟಾಗಿ ಸರ್ಕಾರ ಮಾಡಿದ್ದೇವೆ ಎಂದ ಮೇಲೆ ಚುನಾವಣೆ ಸಹ ಜತೆಯಾಗಿ ಎದುರಿಸಲಿದ್ದೇವೆ. ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ವೈಮನಸ್ಸು ಮರೆತು ಕೆಲಸ ಮಾಡಲಿದ್ದೇವೆ. ಬಿಜೆಪಿಗೆ ಈ ಬಾರಿ ಸೋಲಿನ ರುಚಿ ತೋರಿಸಲಿದ್ದೇವೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಮಾತನಾಡಿ, ಈ ಬಾರಿ ಬಾಗಲಕೋಟೆ ಕ್ಷೇತ್ರಕ್ಕೆ ಮಹಿಳೆಯರಿಗೆ ಅವಕಾಶ ನೀಡಿರುವುವುದು ಖುಷಿ ತಂದಿದೆ. ವಿಜಯಾನಂದ ಕಾಶಪ್ಪನವರ ನನ್ನ ನಡುವೆ ಯಾವುದೇ ಭಿನ್ನಾಪ್ರಾಯವಿಲ್ಲ. ಸಿಎಂ ಕುಮಾರಸ್ವಾಮಿ ಒಂದು ದಿನ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ ಮಾತನಾಡಿ, ಈ ಹಿಂದೆ ಕೇಂದ್ರದ ಯುಪಿಎ ಸರ್ಕಾರ ನೀಡಿದ ಕೊಡುಗೆ, ರಾಜ್ಯ ಸಮ್ಮಿಶ್ರ ಸರ್ಕಾರದ ಯೋಜನೆಗಳನ್ನು ಜನರ ಮುಂದಿಟ್ಟು ಮತಯಾಚಿಸಲಿದ್ದೇವೆ ಎಂದು ತಿಳಿಸಿದರು.

ಮುಖಂಡರಾದ ಸಲೀಂ ಮೋಮಿನ್, ಶಂಕರ ನಾಯಕ, ಶರಣು ಹುರಕಡ್ಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಆಣೆ ಮಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷೃ
ವಿಧಾನಸಭೆ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ನಡುವೆ ಮಾತಿನ ಪ್ರಹಾರ ನಡೆದಿದ್ದವು. ಈ ಕಾರಣಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರನ್ನು ನವಲಿಹಿರೇಮಠ ಬೆಂಬಲಿಸುತ್ತಾರಾ ಎನ್ನುವ ಅನುಮಾನ ಮೂಡಿತ್ತು. ಸುದ್ದಿಗೋಷ್ಠಿಯಲ್ಲಿ ಇದಕೆಲ್ಲ ತೆರೆ ಎಳೆದ ಜಿಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಪಕ್ಷೃದ ನಿರ್ಧಾರದಂತೆ ಬಾಗಲಕೋಟೆಯಲ್ಲಿ ಮೈತ್ರಿ ಪಕ್ಷೃಗಳ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಕೆಲಸ ಮಾಡುತ್ತೇವೆ. ಹಿಂದಿನ ಎಲ್ಲ ಘಟನೆ ಮರೆತು ಒಂದಾಗಿದ್ದೇವೆ. ಕೂಡಲಸಂಗಮನಾಥ ದೇವರ ಮೇಲಾಣೆ ವೀಣಾ ಕಾಶಪ್ಪನವರ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ವಾಗ್ದಾನ ಮಾಡಿದರು. ಇದಕ್ಕೆ ಜೆಡಿಎಸ್ ಮುಖಂಡರು ಧ್ವನಿಗೂಡಿಸಿದರು.

ಚುನಾವಣೆ ಸಂದರ್ಭದಲ್ಲಿ ಪರಸ್ಪರ ವಾಗ್ದಾಳಿ ಮಾಡುವುದು ಸಹಜ. ಇದೀಗ ಎಲ್ಲವನ್ನು ಮರೆತು ಬಾಗಲಕೋಟೆ ಜಿಲ್ಲೆಯಲ್ಲಿ ಜಂಟಿಯಾಗಿ ಚುನಾವಣೆ ಎದುರಿಸಲಿದ್ದೇವೆ. ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯವಿದ್ದರೂ ಸ್ಥಳೀಯ ಮಟ್ಟದಲ್ಲಿ ಬಗೆಹರಿಸಿ ಕಾಂಗ್ರೆಸ್ ಗೆಲ್ಲಿಸಲಿದ್ದೇವೆ. ಏ.1ರಂದು ಬೆಳಗ್ಗೆ 10.30 ಗಂಟೆಗೆ ನಾಮಪತ್ರ ಸಲ್ಲಿಸಿ ಮಧ್ಯಾಹ್ನ 2 ಗಂಟೆಗೆ ಬಾಗಲಕೋಟೆ ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ 6 ಗಂಟೆಗೆ ಸಕ್ರಿ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ರಾಜ್ಯದ ನಾಯಕರು ಆಗಮಿಸಲಿದ್ದಾರೆ.
– ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ

ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡಿದ್ದೇನೆ. ಜಿಪಂ ಅಧ್ಯಕ್ಷೆಯಾಗಿ ನಾನು ಸೇವೆ ಮಾಡಿರುವುದನ್ನು ಗಮನಿಸಿ ಮತದಾರರ ಆಶೀರ್ವಾದ ಮಾಡಬೇಕು.
– ವೀಣಾ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿ