ಕೈ ದೋಸ್ತಿಗೆ ಕಮಲ ಮುಖಂಡರ ಅಡ್ಡಗೋಡೆ

ಅಶೋಕ ಶೆಟ್ಟರ

ಬಾಗಲಕೋಟೆ: ಕಳೆದ ಸಲದಂತೆ ಬಿಜೆಪಿ ಸದಸ್ಯರನ್ನು ಸೆಳೆದು ಜಿಪಂನಲ್ಲಿ ಸುಲಭವಾಗಿ ಅಧಿಕಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್ ಆಟಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದ ಉಸ್ತುವಾರಿ ವಹಿಸಿರುವ ಮಾಜಿ ಡಿಸಿಎಂ ಈಶ್ವರಪ್ಪ ಅವರ ಸ್ಪಷ್ಟ ಹಾಗೂ ಖಡಕ್ ಸೂಚನೆ ಮೇರೆಗೆ ಬಿಜೆಪಿ ಸದಸ್ಯರು ಮೈಕೊಡವಿದ್ದಾರೆ. ಅಧ್ಯಕ್ಷ ಸ್ಥಾನ ಪಡೆಯಲು ರಣತಂತ್ರ ಹೆಣೆಯುತ್ತಿದ್ದು, ಅಸಲಿ ಪಂದ್ಯಕ್ಕೆ ಸಿದ್ಧರಾಗಿದ್ದಾರೆ.

ಶನಿವಾರ ಈಶ್ವರಪ್ಪ ಕರೆದಿದ್ದ ಸಭೆಗೆ ಗೈರು ಉಳಿದಿದ್ದ ಮೂವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಹಾಗೂ ಕಳೆದ ಸಲ ಅಧ್ಯಕ್ಷರ ಆಯ್ಕೆ ವೇಳೆ ಗೈರು ಉಳಿದಿದ್ದ ಮಹಿಳಾ ಸದಸ್ಯೆಯರನ್ನು ಮನವೊಲಿಸಲು ನಿರ್ಧರಿಸಲಾಗಿದೆ. ಕಳೆದ ಸಲ ಕೈಕೊಟ್ಟಿದ್ದ ಮಹಿಳಾ ಸದಸ್ಯೆ ಪಕ್ಷದ ಜತೆಗೆ ಇರುವುದಾಗಿ ಅಭಯ ನೀಡಿದ್ದಾರಂತೆ. ಜಿ.ಪಂ. ಸದಸ್ಯರು ಅತ್ತಿತ್ತ ಕದಲದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರು ನೋಡಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರೂ ಒಪ್ಪಿದ್ದು, ಜಿಪಂ ಗದ್ದುಗೆ ಹಿಡಿಯಲು ಬಿಜೆಪಿ ಅಖಾಡಕ್ಕೆ ಇಳಿಯಲಿದೆ.

ಒಳ ಒಪ್ಪಂದಕ್ಕೆ ಗುದ್ದು?
ಜಿ.ಪಂ. ಅಧ್ಯಕ್ಷೆ ಆಗಿದ್ದ ವೀಣಾ ಕಾಶಪ್ಪನವರ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸ್ವಪಕ್ಷದ ಕೆಲ ಸದಸ್ಯರು ಖೆಡ್ಡಾ ತೋಡಿದ್ದು, ಅದಕ್ಕೆ ಬಿಜೆಪಿ ಸದಸ್ಯರನ್ನು ತೋರಿಸಿ, ಅವಿಶ್ವಾಸದ ಬೆದರಿಕೆ ಹಾಕಿ, ವೀಣಾ ರಾಜೀನಾಮೆ ಪಡೆಯುವಲ್ಲಿ ಭಿನ್ನರ ಬಣ ಯಶಸ್ವಿಯಾಗಿತ್ತು.

ಬಿಜೆಪಿ ನೆರವಿನೊಂದಿಗೆ ಅಧ್ಯಕ್ಷ ಸ್ಥಾನ ಪಡೆಯಲು ಕಾಂಗ್ರೆಸ್ ಪಕ್ಷದ ಸದಸ್ಯರು ಮುಂದಾಗಿದ್ದಾರೆ. ಮಾಜಿ ಸಚಿವ ಎಚ್.ವೈ. ಮೇಟಿ ಪುತ್ರಿ ಬಾಯಕ್ಕನಿಗೆ ಪಟ್ಟಕಟ್ಟಲು ವೇದಿಕೆ ಸಿದ್ಧ ಮಾಡಿದ್ದರು.

ಆದರೆ, ಈ ಅಕ್ರಮ ಸಂಬಂಧದಿಂದ ಲೋಕಸಭೆ ಚುನಾವಣೆ ಮೇಲೆ ಆಗುವ ಅಡ್ಡಪರಿಣಾಮ ಗಮನಿಸಿದ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಈಶ್ವರಪ್ಪ ಒಳ ಒಪ್ಪಂದಕ್ಕೆ ಗುದ್ದು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಅವಿರೋಧ ಆಯ್ಕೆಗೆ ಅವಕಾಶ ಕೊಡಬಾರದು ಎಂದು ನಿರ್ಧರಿಸಿ, ಅಸಲಿ ಆಟಕ್ಕೆ ಮೈದಾನ ಪ್ರವೇಶಿಸಿದ್ದಾರೆ.

ಬಾಯಕ್ಕ ವಿರೋಧಿಗಳ ಸೆಳೆಯಲು ತಂತ್ರ
ಮಾಜಿ ಸಚಿವ ಎಚ್.ವೈ. ಮೇಟಿ ಬಿಟಿಡಿಎ ಅಧ್ಯಕ್ಷ ಆಗುತ್ತಿದ್ದಂತೆ ಜಿಪಂನಲ್ಲಿ ಬಾಯಕ್ಕ ಮೇಟಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಲು ಕಾಂಗ್ರೆಸ್ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಬಾಯಕ್ಕ ವಿರೋಧಿ ಕೂಟದ ಬೆಂಬಲ ಪಡೆದು ಅಧಿಕಾರ ಪಡೆಯಲು ಬಿಜೆಪಿ ರಣತಂತ್ರ ಸಿದ್ಧಪಡಿಸುತ್ತಿದೆ. ಈಗಾಗಲೇ ಮೂವರು ಕಾಂಗ್ರೆಸ್ ಸದಸ್ಯರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೈ ಪಕ್ಷ ಕೈ ಕಟ್ಟಿ ಕುಳಿತಿಲ್ಲ
ಬಿಜೆಪಿ ಜಿ.ಪಂ. ಚುನಾವಣೆಯಲ್ಲಿ ಸೆಡ್ಡು ಹೊಡೆಯಬಹುದು ಎನ್ನುವ ಅನುಮಾನ ಇದ್ದಿದ್ದರಿಂದ ಕಾಂಗ್ರೆಸ್ ಪಕ್ಷ ಸಹ ಅಧಿಕಾರ ಹಿಡಿಯಲು ತಂತ್ರ ರೂಪಿಸಿದೆ. ಇದು ಬಾದಾಮಿ ಶಾಸಕ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯಾಗಿದೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ವೀಣಾ ಕಾಶಪ್ಪನವರ ರಾಜೀನಾಮೆ ನೀಡಿದ್ದರಿಂದ ಇದೀಗ ಅಧಿಕಾರ ಮರಳಿ ಪಕ್ಷಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಮಾಜಿ ಸಿಎಂಗೆ ಇದೆ. ಹೀಗಾಗಿಯೇ ಬಿಜೆಪಿಯಲ್ಲಿನ ಇಬ್ಬರು ಇಲ್ಲವೆ ಮೂವರನ್ನು ಸೆಳೆಯಲು ಹಸಿರು ನಿಶಾನೆ ತೋರಿಸಿದ್ದು, ಈಗಾಗಲೇ ಮೂವರು ಬಿಜೆಪಿ ಸದಸ್ಯರು ಬಾಯಕ್ಕ ಮೇಟಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಗ್ರಹಿಸಿರುವ ಹಾಗೂ ಯಾವುದೇ ಪ್ರತಿರೋಧ ತೋರದೆ ಸಿದ್ದರಾಮಯ್ಯ ಅವರ ಮೇಲುಗೈ ಆಗಲು ಬಿಡಬಾರದೆನ್ನುವುದು ಈಶ್ವರಪ್ಪ ಅವರ ಲೆಕ್ಕಾಚಾರವಂತೆ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಜತೆಗೆ ಅಕ್ರಮ ನೆಂಟಸ್ಥಿಕೆ ಬೇಡವೇ ಬೇಡ ಎಂದು ಹೇಳಿದ್ದಲ್ಲದೆ ಬಿಜೆಪಿ ಸದಸ್ಯರಲ್ಲಿ ಅಧಿಕಾರ ಉತ್ಸಾಹ ಮೂಡಿಸಿದ್ದಾರಂತೆ.

ಆಪರೇಷನ್ ಪ್ಲೆಜ್ ೇಲ್?
ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಗ್ಗೂಡಿ ರೂಪಿಸಿದ್ದ ಆಪರೇಷನ್ ಪ್ಲೆಜ್ ಯೋಜನೆ ತಲೆಕೆಳಗಾಗುವ ಸಂಭವ ಇದೆ. ಅಂದುಕೊಂಡಂತೆ ಆಗಿದ್ದರೆ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಸಾಲ ಪಡೆದಂತೆ ದಾಖಲೆ ಸೃಷ್ಟಿಸಿ, ಅವರ ಆಸ್ತಿಯ ಮೇಲೆ ಸೋಮವಾರ ನೋಂದಣಿ ಕಚೇರಿಯಲ್ಲಿ ಬೋಜಾ ಕೂಡಿಸಲು ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಬಿಜೆಪಿಯಲ್ಲಿ ಆಗಿರುವ ಬೆಳವಣಿಗೆಯಿಂದ ಆಪರೇಷನ್ ಪ್ಲೆಜ್ ೇಲ್ ಆಗುವ ಸಂಭವವಿದೆ. ಇದೀಗ ನೇರ ಹೋರಾಟಕ್ಕೆ ಅಖಾಡ ಸಿದ್ಧವಾಗಿದೆ ಎಂದು ಬಿಜೆಪಿ ಸದಸ್ಯರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಮಾ. 14ರಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧಿಕಾರ ಗದ್ದುಗೆ ಹಿಡಿಯಲು ಮ್ಯಾಜಿಕ್ ಸಂಖ್ಯೆ 19. 36 ಸದಸ್ಯ ಬಲದ ಜಿಪಂನಲ್ಲಿ ಬಿಜೆಪಿ 18, ಕಾಂಗ್ರೆಸ್ 17 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರಲು ಒಂದು ಸಂಖ್ಯೆ ಕಡಿಮೆ ಇದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಇಬ್ಬರ ಬೆಂಬಲ ಬೇಕಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಮುತ್ತಪ್ಪ ಕೋಮಾರ ಕಾಂಗ್ರೆಸ್ ಕೈ ಹಿಡಿದು, ಉಪಾಧ್ಯಕ್ಷ ಸ್ಥಾನ ಪಡೆದಿದ್ದರು.
ಎರಡು ದಿನಗಳ ಹಿಂದಷ್ಟೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಮುತ್ತಪ್ಪ ಕೋಮಾರ ಮತ್ತೆ ಕೈ ಪಕ್ಷಕ್ಕೆ ಬೆಂಬಲಿಸುವ ಸಾಧ್ಯತೆ ಇದೆ. ಹೀಗಾಗಿ ಎರಡು ಕಡೆಗೂ 18 ಸದಸ್ಯರಿದ್ದಾರೆ. ಈ ಇಬ್ಬರಲ್ಲಿ ಯಾವ ಪಕ್ಷದವರು ಒಬ್ಬರನ್ನು ಸೆಳೆಯುತ್ತಾರೋ ಅವರಿಗೆ ಗದ್ದುಗೆ ಸಿಗಲಿದೆ.

ನೀತಿ ಸಂಹಿತೆ ಅಡ್ಡಿ ಆಗುತ್ತ ?
ಜಿಪಂ ಅಧ್ಯಕ್ಷರ ಆಯ್ಕೆಗೆ ಮಾ.14ರಂದು ಚುನಾವಣೆ ನಿಗದಿ ಆಗಿದೆ. ಇದೀಗ ಲೋಕಸಭೆ ಚುನಾವಣೆಗೂ ಮುಹೂರ್ತ ಫಿಕ್ಸ್ ಆಗಿದ್ದು, ನೀತಿ ಸಂಹಿತೆ ಜಾರಿಗೆ ಬಂದಿದೆ. ಹೀಗಾಗಿ ಇದು ಜಿಪಂ ಅಧ್ಯಕ್ಷ ಚುನಾವಣೆಗೂ ಅನ್ವಯ ಆಗುತ್ತದೆಯೇ ಎನ್ನುವ ಪ್ರಶ್ನೆಯೂ ಇದೆ.

ಅಧ್ಯಕ್ಷರ ಚುನಾವಣೆಗೆ ಇದು ಅನ್ವಯ ಆಗುತ್ತದೆಯೋ ಇಲ್ಲವೋ ಎನ್ನುವ ಕುರಿತು ರಾಜ್ಯ ಚುನಾವಣಾಧಿಕಾರಿಗಳಿಂದ ಮಾಹಿತಿ ಕೋರಲಾಗುತ್ತದೆ. ಅವರ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಪಂ ಅಧ್ಯಕ್ಷ ಚುನಾವಣೆಯ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.