ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಬಾಗಲಕೋಟೆ: ತಾಲೂಕಿನ ಬೇವೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ 23 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಗ್ರಾಮದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಎಂದಿನಂತೆ ಬಿಸಿಯೂಟ ಸೇವನೆ ಮಾಡಿದ್ದಾರೆ. ಏಕಾಏಕಿ ವಾಂತಿ, ಹೊಟ್ಟೆ ನೋವುನಿಂದ ಬಳಲಿದರು. ತಕ್ಷಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. 23 ಬಾಲಕಿಯರ ಪೈಕಿ 6 ಜನರ ಆರೋಗ್ಯ ಸುಧಾರಣೆಗೊಂಡಿದ್ದರಿಂದ ಮನೆಗೆ ಕಳುಹಿಸಲಾಯಿತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 17 ಬಾಲಕಿಯರನ್ನು ಬಾಗಲಕೋಟೆ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬೇವೂರ ಗ್ರಾಮಕ್ಕೆ ಡಿಎಚ್‌ಒ ಡಾ.ಅನಂತ ದೇಸಾಯಿ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಪಂ ಸದಸ್ಯೆ ಕವಿತಾ ದಡ್ಡಿ, ಡಿಡಿಪಿಐ ಬಿ.ಎಚ್. ಗೋನಾಳ ಭೇಟಿ ನೀಡಿ ಮಾಹಿತಿ ಪಡೆದರು. ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಶಾಸಕ ಡಾ.ವೀರಣ್ಣ ಚರಂತಿಮಠ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಬೇವೂರ ಗ್ರಾಮದಲ್ಲಿ ಬಾಲಕಿಯರ ಮತ್ತು ಬಾಲಕರ ಪ್ರತ್ಯೇಕ ಶಾಲೆಗಳಿದ್ದು, ಎರಡೂ ಶಾಲೆಗಳಿಗೆ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆಯಲ್ಲೇ ಮಧ್ಯಾಹ್ನದ ಬಿಸಿ ಊಟ ಸಿದ್ಧಪಡಿಸಲಾಗುತ್ತದೆ. ನಿತ್ಯದಂತೆ ಶುಕ್ರವಾರ ಮಧ್ಯಾಹ್ನ ಬಾಲಕಿಯರು ಬಿಸಿ ಊಟ ಸೇವಿಸಿದ್ದರು.ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಶಾಲೆಯ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.