ನಮ್ಮ ಬೇಡಿಕೆ ಈಡೇರಿದರೆ ಬಾದಾಮಿಯಲ್ಲಿ ಸಿದ್ದರಾಮಯ್ಯನವರ ದೇವಸ್ಥಾನ ಕಟ್ಟುತ್ತೇವೆ

ಬಾಗಲಕೋಟೆ: ನಮ್ಮ ಬಹು ವರ್ಷಗಳ ಬೇಡಿಕೆ ಈಡೇರಿಸಿದರೆ ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದೇವಾಲಯ ಕಟ್ಟಿಸುತ್ತೇವೆ ಎಂದು ಭೋವಿ ಸಮಾಜದ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ ಸ್ವಾಮೀಜಿ, ನಮ್ಮನ್ನು ಯಾರಾದರೂ ಸ್ವಲ್ಪ ಗುರುತಿಸಿ ಬೆಳೆಸಿದ್ದಾರೆ ಎಂದರೆ ಅದು ಸಿದ್ದರಾಮಯ್ಯ ಅಂಥ ಘಂಟಾಘೋಷವಾಗಿ ಹೇಳುತ್ತೇವೆ. ಆದರೆ, ಕಳೆದ ನಾಲ್ಕು ದಶಕಗಳಿಂದ ನಮ್ಮದೊಂದು ಬೇಡಿಕೆ ಇದೆ ಎಂದರು.

ಬಾದಾಮಿ ತಾಲೂಕಿನಲ್ಲಿ ನಮ್ಮ ಸಮಾಜದ ಒಂದು ನೂರು ಕುಟುಂಬಗಳು ಸರ್ಕಾರದ ಜಮೀನನ್ನು ಬಳಕೆ ಮಾಡಿಕೊಂಡು ಬಂದಿದ್ದಾರೆ. ಆ ಬಗ್ಗೆ ದಾಖಲೆಗಳಿದ್ದರೂ ಈವರೆಗೂ ಭೂಮಿ ಅವರ ಹೆಸರಿಗೆ ಆಗುತ್ತಿಲ್ಲ. ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಿದ್ದಾರೆ. ಇದೀಗ ಬಾದಾಮಿ ಶಾಸಕರು ಸಿದ್ದರಾಮಯ್ಯ ಇದ್ದಾರೆ. ನಮ್ಮ ಜನರ ಈ ಬೇಡಿಕೆಯನ್ನು ಈಡೇರಿಸಿದಲ್ಲಿ ಬಾದಾಮಿಯಲ್ಲಿ ಹುಚ್ಚೇಶ್ವರ ದೇವಸ್ಥಾನ ಕಟ್ಟಿಸಿರುವ ನಾವು ಸಿದ್ದರಾಮಯ್ಯ ಅವರ ದೇವಾಲಯ ನಿರ್ಮಿಸುತ್ತೇವೆ ಎಂದು ಘೋಷಣೆ ಮಾಡಿದರು.

ಸಿದ್ದರಾಮಯ್ಯ ಅವರು ಈಗಲೂ ಮುಖ್ಯಮಂತ್ರಿಗಳು ಇದ್ದಂಗೆ. ಅವರಿಗೆ ಮಾಜಿ ಪದವನ್ನು ನಾವು ಸೇರಿಸಲ್ಲ ಎಂದಾಗ ಪಕ್ಕದಲ್ಲಿದ್ದ ಮಾಜಿ ಸಿಎಂ ನಸುನಕ್ಕರು.