ಜಿಲ್ಲೆಗೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಭೇಟಿ

ಬಾಗಲಕೋಟೆ : ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾರಣ ತಿಳಿಯಲು ಕೆಪಿಸಿಸಿ ನೇಮಿಸಿರುವ ಸತ್ಯ ಶೋಧನಾ ಸಮಿತಿ ಬುಧವಾರ ಬಾಗಲಕೋಟೆಗೆ ಭೇಟಿ ನೀಡಿತು.

ಸತ್ಯ ಶೋಧನಾ ಸಮಿತಿ ಸದಸ್ಯರಾದ ವಿ.ಆರ್. ಸುದರ್ಶನ್, ಬಸವರಾಜ ರಾಯರೆಡ್ಡಿ, ವೀರಕುಮಾರ ಪಾಟೀಲ, ವೀರಣ್ಣ ಮತ್ತಿಕಟ್ಟಿ, ಧ್ರುವನಾರಾಯಣ ಅವರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬೆಳಗ್ಗೆ ಜಿಲ್ಲೆಯ ಮಾಜಿ ಹಾಗೂ ಹಾಲಿ ಶಾಸಕರು, ಪಕ್ಷದ ಪದಾಧಿಕಾರಿಗಳ ಜತೆಗೆ ಚರ್ಚೆ ನಡೆಸಿದರು. ಜನರಿಂದ ಅಭಿಪ್ರಾಯ ಸಂಗ್ರಹಿಸಿದರು. ಲಿಖಿತ ರೂಪದಲ್ಲಿ ಸೋಲಿನ ಕಾರಣಗಳನ್ನು ಮುಕ್ತವಾಗಿ ತಿಳಿಸುವಂತೆ ನಿರ್ದೇಶನ ನೀಡಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, 2018ರ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣ ಏನು ಎಂಬುದರ ಕುರಿತು ಪ್ರತಿ ಕ್ಷೇತ್ರದಿಂದ ಮಾಹಿತಿ ಪಡೆಯಲಾಗುತ್ತಿದೆ. ಆಗಸ್ಟ್‌ವರೆಗೆ ರಾಜ್ಯವ್ಯಾಪಿ ಸಂಚರಿಸಿ ಸೆಪ್ಟೆಂಬರ್‌ನಲ್ಲಿ ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ಹಿರಿಯರು ಈ ಸಮಿತಿಯಲ್ಲಿದ್ದು, ಈಗಾಗಲೇ ಕೊಪ್ಪಳ, ಬೀದರ್, ಕಲಬುರಗಿ, ರಾಯಚೂರು ಸೇರಿ ಬಹುತೇಕ ಭಾಗದಲ್ಲಿ ಭೇಟಿ ನೀಡಲಾಗಿದೆ. ಸೋತ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು, ಮಾಜಿ-ಹಾಲಿ ಶಾಸಕರು, ಜಿಲ್ಲಾ ಅಧ್ಯಕ್ಷರಿಗೆ ಲಿಖಿತ ರೂಪದ ಪ್ರಶ್ನಾವಳಿ ನೀಡಿದ್ದು, ಅವರು ನೀಡಿದ ವಿವರಣೆ ಸಂಗ್ರಹಿಸಿ ವರದಿ ಸಲ್ಲಿಸಲಾಗುವುದು ಎಂದರು.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ 96 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಭಾವಿಸಬೇಕಿಲ್ಲ. ಕಾಂಗ್ರೆಸ್ ಕಥೆ ಮುಗಿದೇ ಹೋಯಿತು ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಸುಧಾರಣೆ, ಪಕ್ಷ ಸಂಘಟನೆಗೆ ಸಾಕಷ್ಟು ಅವಕಾಶವಿದೆ. ಸೋಲಿನ ಕಾರಣ ಅವಲೋಕನ ಮಾಡುವುದು ಮುಖ್ಯ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಉಮಾಶ್ರೀ, ಬಿ.ಆರ್. ಯಾವಗಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ದಡ್ಡಿ, ಎಸ್‌ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ ಇತರರು ಇದ್ದರು.

 

Leave a Reply

Your email address will not be published. Required fields are marked *