ಆಪರೇಷನ್ ಕಮಲ ಪ್ರಜಾಪ್ರಭುತ್ವದ ಕಗ್ಗೊಲೆ

<< ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ > ಸಮ್ಮಿಶ್ರ ಸರ್ಕಾರ ಸುಭದ್ರ >>

ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಬಂದ ಮಾತ್ರಕ್ಕೆ ಅವರಿಗೆ ಆಪರೇಷನ್ ಕಮಲ ಮಾಡು ಅಂತ ಯಾರಾದರೂ ಹೇಳಿದ್ದಾರೆಯೇ ? ಮತ್ತೇಕೆ ಆ ಕೆಲಸ ಮಾಡುತ್ತಿದ್ದಾರೆ. ಆಪರೇಷನ್ ಕಮಲ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಕಮಲ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಜಮಖಂಡಿ ಕ್ಷೇತ್ರದ ಸಾವಳಗಿ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರಿಗೆ 25 ಕೋಟಿ ರೂ. ಆಮಿಷವೊಡ್ಡಿ ಖರೀದಿ ಮಾಡೋದು ಸರಿನಾ ? ಬಿಜೆಪಿಯವರಿಂದಲೇ ಆಪರೇಷನ್ ಕಮಲ ಅಂತ ಹೆಸರು ಬಂದಿದ್ದು. ಆದರೆ, ಅವರು ಏನೇ ಮಾಡಿದರೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ವೈಯಕ್ತಿಕವಾದದ್ದು. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ವಿಷಯಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಈ ಬಗ್ಗೆ ಅರ್ಜಿ ಬಂದಿತ್ತು. ಅದಕ್ಕೆ ಸಂಪುಟದಲ್ಲಿ ಸರ್ವಾನುಮತ ಒಪ್ಪಿಗೆ ದೊರೆಯಿತು. ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದು ನಮ್ಮ ಅಸ್ಮಿತೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.

ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಬೆಳವಣಿಗೆಗೆ ಬ್ರೇಕ್ ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಯಾರು ಯಾರಿಗೂ ಬ್ರೇಕ್ ಹಾಕಲು ಅಗಲ್ಲ. ನಮಗೆ ಡಿಕೆಶಿ ಬ್ರೇಕ್ ಹಾಕಲು ಆಗಲ್ಲ. ಅವರಿಗೆ ನಾವು ಬ್ರೇಕ್ ಹಾಕಲು ಆಗಲ್ಲ ಎಂದರು.

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದಿರುವ ಪಿ.ಚಿದಂಬರಂ ಹೇಳಿಕೆ ವೈಯಕ್ತಿಕ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ರಾಹುಲ್ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ತಿಳಿಸಿದರು.